ಬೆಂಗಳೂರು: ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ವಿರುದ್ಧ ನಟ, ನಿರ್ಮಾಪಕ ಮದನ್ ಪಟೇಲ್ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮದನ್ ಪಟೇಲ್, ಸುನೀಲ್ ಪುರಾಣಿಕ್ ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡಿದ್ದು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ. ಈ ಬಗ್ಗೆ ಎಸಿಬಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಒಮ್ಮೆ ನಾಲ್ಕುವರೆ ಕೋಟಿ ಇನ್ನೊಮ್ಮೆ ಎಂಟು ಕೋಟಿಯಷ್ಟು ದುಂದುವೆಚ್ಚ ಮಾಡಿದ್ದು, ಸುನೀಲ್ ಪುರಾಣಿಕ್ ಈ ಹಣವನ್ನು ಯಾರ ಜೇಬಿಗೆ ಸಂದಾಯ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ನನಗೆ ಸುನೀಲ್ ಮೇಲೆ ಯಾವುದೇ ದ್ವೇಷವಿಲ್ಲ ಆದರೆ ಜನರ ಹಣವನ್ನು ಈ ರೀತಿ ಹಾಳು ಮಾಡಿರುವುದು ಸರಿಯಲ್ಲ ಹೀಗಾಗಿ ಎಸಿಬಿಗೆ ದಾಖಲೆ ಸಮೇತ ದೂರು ನೀಡಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.