ರಾಜ್ಯ ಸರ್ಕಾರ ಕೆಲವೊಂದು ಆದೇಶಗಳನ್ನು ಹೊರಡಿಸಿ ಮತ್ತೆ ವಾಪಸ್ ಪಡೆದಿರುವ ಕುರಿತು ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಾವು ಹೊರಡಿಸಿದ್ದ ಒಂದು ಆದೇಶವನ್ನು 24 ಗಂಟೆ ಒಳಗೆ ವಾಪಸ್ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 11 ರಾಜ್ಯ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಿದ್ದ ಉಪ ನಿರ್ದೇಶಕರು ಜಿಲ್ಲೆಯ ಪದವಿಪೂರ್ವ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕರೆತರುವಂತೆ ಪ್ರಾಂಶುಪಾಲರುಗಳಿಗೆ ಸೂಚಿಸಿದ್ದರು.
ಅಲ್ಲದೆ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರು ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಬೇಕು. ತಪ್ಪಿದರೆ ಮುಂದಿನ ಆಗು ಹೋಗುಗಳಿಗೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಲಾಗಿತ್ತು. ಈ ಸುತ್ತೋಲೆ ವಿಷಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಇದೀಗ ಆದೇಶವನ್ನು ಹಿಂಪಡೆಯಲಾಗಿದೆ.