ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಸಮರ ಇದೀಗ ಸುತ್ತೂರು ಮಠದ ಅಂಗಳ ತಲುಪಿದ್ದು, ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪಾ ನಾಗ್ ಸುತ್ತೂರು ಶ್ರೀಗಳನ್ನು ಭೇಟಿಯಾಗಿ ದೂರು ನೀಡಿದ್ದಾರೆ.
ಸುತ್ತೂರು ಮಠದ ಕಾರ್ಯಕ್ರಮವೊಂದರಲ್ಲಿ ಪ್ರತ್ಯಕ್ಷರಾದ ಶಿಲ್ಪಾ ನಾಗ್, ಶ್ರೀಗಳನ್ನು ಭೆಟಿಯಾಗಿ ದೂರು ನೀಡಿದ್ದಾರೆ. ರೋಹಿಣಿ ಸಿಂಧೂರಿ ಪ್ರಶ್ನಿಸಿದ್ದ ಸಿ ಎಸ್ ಆರ್ ಫಂಡ್ ಹಣವನ್ನು ಆಸ್ಪತ್ರೆಗಳಲ್ಲಿ ಔಷಧಿಗಳಿಗಾಗಿ ಹಾಗೂ ವೈದ್ಯರ ನೇಮಕಾತಿಗಾಗಿ ಬಳಸಿಕೊಂಡಿರುವುದಾಗಿ ವಿವರಿಸಿದ್ದಾರೆ. ಅಲ್ಲದೇ ತಮ್ಮ ರಾಜೀನಾಮೆ ದುಡುಕಿನ ನಿರ್ಧಾರವಲ್ಲ, ನೋವಿನಿಂದ ರಾಜೀನಾಮೆ ನೀಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಸಮರ್ಪಕವಾಗಿಯೇ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಮೈಸೂರು ಮಹಾನಗರ ಪಾಲಿಕೆ ಮುಂದೆ ಶಿಲ್ಪಾ ನಾಗ್ ಬೆಂಬಲಿಸಿ ಪಾಲಿಕೆ ಸದಸ್ಯರು, ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿ ರೋಹಿಣಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ನಡುವೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿಯಾಗಿದ್ದು, ಜಿಲ್ಲೆಯಲ್ಲಿನ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದಾರೆ.