ಬೆಂಗಳೂರು: ಚನ್ನಪಟ್ಟಣದಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜಕೀಯಕ್ಕಾಗಿ ಎಂಎಲ್ ಸಿ ಓರ್ವನಿಂದ ಇಂತಹ ನಡೆ ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸರ್ಕಾರದ ನಿಯಮಾವಳಿಗಳನ್ನೇ ಗಾಳಿಗೆ ತೂರಿ ಕಾರ್ಯಕ್ರಮ ನಡೆಸಿದ್ದಾರೆ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಯಾವತ್ತೂ ಅಡ್ಡಿ ಪಡಿಸಿಲ್ಲ. ನನ್ನ ಕ್ಷೇತ್ರದ ಬಗ್ಗೆ ನಾನು ಮೊದಲ ಆದ್ಯತೆ ನೀಡುತ್ತೇನೆ. ಇದು ಸರ್ಕಾರದ ಯೋಜನೆಗಳ ಅನುದಾನದ ಕಾರ್ಯಕ್ರಮ. ನಿನ್ನೆ ರಾತ್ರಿ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಪತ್ರ ಬರೆದಿದ್ದಾರೆ. ಪತ್ರ ಬರೆದವನೇ ಇಂದು ನಡೆದ ಕಾರ್ಯಕ್ರಮದಲ್ಲಿ ಓಡಾಡುತ್ತಿದ್ದಾನೆ. ರಾಜಕೀಯ ದುರುದ್ದೇಶಕ್ಕಾಗಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ದೊಂಬಿ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಸಿಎಂ ಆಗಿ ಏನು ಮಾಡಿದ್ದೇನೆ ಎಂಬುದು ಗೊತ್ತಿದೆ. ನಾನು ಶಾಸಕನಾಗಿ ಆಯ್ಕೆಯಾಗಿ ನಾಲ್ಕು ವರ್ಷಗಳಾಗಿವೆ. ನನ್ನ ಕ್ಷೇತ್ರದ ಅಭಿವೃದ್ಧಿ, ಅನುದಾನಗಳ ಕಾರ್ಯಕ್ರಮಗಳ ಬಗ್ಗೆ ನಾನು ಮೊದಲ ಆದ್ಯತೆ ವಹಿಸುತ್ತೇನೆ. ದೊಂಬಿ ಎಬ್ಬಿಸಿ ಗಲಾಟೆ ಮಾಡುವ ಅಗತ್ಯ ನನಗಿಲ್ಲ. ಸಿ.ಪಿ.ಯೋಗೇಶ್ವರ್ ಅವರಿಂದ ನಾನು ಸರ್ಟಿಫಿಕೇಟ್ ಪಡೆದುಕೊಳ್ಳಬೇಕಿಲ್ಲ. ರಾಜಕೀಯಕ್ಕಾಗಿ ಓರ್ವ ಪರಿಷತ್ ಸದಸ್ಯ ಇಂತಹ ದುರುದ್ದೇಶ ಹೊಂದಿರುವುದು ಸರಿಯಲ್ಲ. ಅನುದಾನ ಬಿಡುಗಡೆಯಾಗಿರುವುದು ರಾಜ್ಯದ ಜನರ ತೆರಿಗೆ ಹಣ. ಅದು ಬೇಕಾದಂತೆ ಖರ್ಚು ಮಾಡಲು ಇರುವ ಹಣವಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.