ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಬಿಬಿಎಂಪಿ ವತಿಯಿಂದ 8 ವಲಯಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದ್ದು, ಹೈರಿಸ್ಕ್ ರಾಜ್ಯಗಳಿಂದ ಬಂದ ಪ್ರಯಾಣಿಕರ ಕ್ವಾರಂಟೈನ್ ಕಡ್ಡಾಯವಾಗಿದೆ. ಹೋಂ ಕ್ವಾರಂಟೈನ್ ಗೆ ಯಾವುದೇ ಅವಕಾಶವಿಲ್ಲ, ಪ್ರಯಾಣಿಕರ ಬಳಿ ಒಂದು ವೇಳೆ ಕೋವಿಡ್ ಟೆಸ್ಟ್ ರಿಪೋರ್ಟ್ ಇಲ್ಲದಿದ್ದಲ್ಲಿ ಬಿಬಿಎಂಪಿಯಿಂದಲೇ ಟೆಸ್ಟ್ ಮಾಡಲಾಗುತ್ತಿದ್ದು, ವರದಿ ಬರುವವರೆಗೂ ಕ್ವಾರಂಟೈನ್ ನಲ್ಲಿಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಡೆಲ್ಟಾ ಪ್ಲಸ್ ಗೆ ಪರಿಣಾಮಕಾರಿ ಕೊವ್ಯಾಕ್ಸಿನ್ ಲಸಿಕೆ: ಐಸಿಎಂಆರ್
ಈಗಾಗಲೇ ಕೇರಳ ಹಾಗೂ ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಬಸ್, ರೈಲ್ವೆ, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ತಪಾಸಣೆ ನಡೆಸಲಾಗಿದೆ. ಕೊರೊನಾ ಸೋಂಕಿನ ಬಗ್ಗೆ ಪೂರ್ವ ಸಿದ್ಧತೆ ಅಗತ್ಯವಿದೆ. ಸಾಮಾನ್ಯ ಜನರು ಜೀವನ ನಡೆಸುವ ಅನಿವಾರ್ಯವಿದೆ. ಕಂಟೈನ್ಮೆಂಟ್ ವಿಚಾರದಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಸಭೆ ನಡೆಸಿ ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.