ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ತಿರುಗಿ ಬಿದ್ದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಿವಕುಮಾರ್ ಅವರನ್ನು ರಾಜಕೀಯವಾಗಿ ನಿರ್ನಾಮ ಮಾಡುವುದಾಗಿ ಶಪಥ ಮಾಡಿದ್ದಾರೆ. ಅಲ್ಲದೆ ಸಿಡಿ ಕೇಸ್ ನಲ್ಲಿ ಜೈಲಿಗೆ ಕಳುಹಿಸುವುದಾಗಿಯೂ ಗುಡುಗಿದ್ದಾರೆ.
ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ಅವರದ್ದೆನ್ನಲಾದ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ತಾವು ವಿದೇಶದಲ್ಲೂ ಮನೆ ಹೊಂದಿರುವುದಾಗಿ ಹೇಳಿದ್ದು ಕೇಳಿ ಬಂದಿತ್ತು. ಡಿಕೆಶಿ ಒಬ್ಬ ಭ್ರಷ್ಟ ಎಂಬ ಆರೋಪ ಮಾಡಿದ್ದ ರಮೇಶ್ ಜಾರಕಿಹೊಳಿ, ಸಿಡಿ ಮೂಲಕ ನನ್ನ ವೈಯಕ್ತಿಕ ಬದುಕನ್ನೇ ನಾಶಮಾಡಲು ಹೊರಟಿದ್ದರು ಎಂದು ಹೇಳಿದ್ದರು.
ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ರಮೇಶ್ ಜಾರಕಿಹೊಳಿ ಒತ್ತಾಯಿಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಹ ಭೇಟಿಯಾಗಿದ್ದರು. ಇದೀಗ ರಮೇಶ್ ಜಾರಕಿಹೊಳಿ ನವದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಈ ಕುರಿತು ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ.
ರಮೇಶ್ ಜಾರಕಿಹೊಳಿ ಇಂದು ಸಂಜೆ ನವದೆಹಲಿಗೆ ತೆರಳುತ್ತಿದ್ದು, ನಾಳೆ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿದೆ ಎಂದು ಹೇಳಲಾಗಿದೆ. ತಮ್ಮೊಂದಿಗೆ ಕೆಲವೊಂದು ದಾಖಲೆಗಳನ್ನು ರಮೇಶ್ ಜಾರಕಿಹೊಳಿ ತೆಗೆದುಕೊಂಡು ಹೋಗಲಿದ್ದು, ಸಿಡಿ ತನಿಖೆಯನ್ನು ಸಿಬಿಐಗೆ ವಹಿಸಲು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಒಂದೊಮ್ಮೆ ಈ ವಿಷಯ ಸಿಬಿಐ ತನಿಖೆಗೆ ಒಳಪಟ್ಟರೇ ಡಿ.ಕೆ. ಶಿವಕುಮಾರ್ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಅದರಲ್ಲೂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ವೇಳೆ ನಡೆಯುತ್ತಿರುವ ಈ ವಿದ್ಯಮಾನ ಕಾಂಗ್ರೆಸ್ ಪಾಳೆಯದಲ್ಲಿ ಕಳವಳ ಮೂಡಿಸಿರುವುದಂತೂ ಸತ್ಯ.