ಬೆಂಗಳೂರು: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ ಸಿದ್ದರಾಮಯ್ಯ ಅಮೃತಮಹೋತ್ಸವ ಕಾರ್ಯಕ್ರಮದ ಬಗ್ಗೆ ಸ್ವಪಕ್ಷದಲ್ಲಿಯೇ ಅಪಸ್ವರಗಳು ಕೇಳಿಬಂದಿವೆ. ಕಾಂಗ್ರೆಸ್ ನ ಈ ಕಾರ್ಯಕ್ರಮದಿಂದ ಸಮಸ್ಯೆಗಳು ಆಗಬಾರದು ಎಂದು ಸಿದ್ದರಾಮೋತ್ಸವ ಸಮಿತಿ ಸದಸ್ಯರಿಗೆ ಸಂಸದ ಡಿ,ಕೆ.ಸುರೇಶ್ ಸಲಹೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಇದನ್ನು ಹಲವರು ಸಿದ್ದರಾಮೋತ್ಸವ ಎಂದು ಕರೆಯುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಇಷ್ಟ ಇದೆಯೋ ಇಲ್ಲವೋ ಆದರೆ ಆಗಾಗ ವ್ಯಕ್ತಿಪೂಜೆ ನಡೆಯುತ್ತಲೇ ಇರುತ್ತದೆ. ಇದನ್ನು ಸಿದ್ದರಾಮೋತ್ಸವ ಎಂದು ಆಚರಿಸಲಾಗುತ್ತಿದೆ ಎಂಬುದನ್ನು ಸಮಿತಿ ಸದಸ್ಯರು ಮರೆಯುವಂತಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರನ್ನೋ ಬಿಂಬಿಸುವ, ವೈಭವೀಕರಿಸುವ ನಿಟ್ಟಿನಲ್ಲಿ ಕೆಲಸವಾಗಬಾರದು. ಇದರಿಂದ ಚುನಾವಣೆ ವರ್ಷದಲ್ಲಿ ನಾಯಕತ್ವದಲ್ಲಿ ಸಮಸ್ಯೆ ಬರಬಹುದು. ಪಕ್ಷಕ್ಕೆ ತೊಂದರೆಯುಂಟಾಗಲೂಬಹುದು. ಆ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.