ಬೆಂಗಳೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75 ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವ ಅವರು ಮಾಡಿಕೊಳ್ಳಲಿ ಬಿಡಿ, ಅದಕ್ಕೆ ನಮ್ಮ ತಕರಾರು ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಿದ್ದರಾಮೋತ್ಸವ ಅವರದ್ದು, ಸಿದ್ದರಾಮ ದೇವರ ಪೂಜೆ ಮಾಡೋದು ನಮ್ಮದು. ಹೀಗಾಗಿ ನಾನು ಇಂದು ದಾವಣಗೆರೆಯ ಸಿದ್ದರಾಮ ದೇವರ ಉತ್ಸವಕ್ಕೆ ಬಂದಿದ್ದೇನೆ. ಆ ಸಿದ್ದರಾಮೋತ್ಸವಕ್ಕಲ್ಲ ಎಂದು ವ್ಯಂಗ್ಯಭರಿತವಾಗಿ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವವನ್ನು ಟೀಕಿಸಿದರು.
ಇನ್ನು ಸರ್ಕಾರದ ಒಂದು ವರ್ಷದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜನೋತ್ಸವ ಸಮಾವೇಶ ನಡೆಸುವ ಬಗ್ಗೆ ಪ್ರಾದೇಶಿಕ, ಜಿಲ್ಲಾ ಸಮಾವೇಶಗಳನ್ನು ನಡೆಸುವ ಬಗ್ಗೆ ಚರ್ಚಿಸಿದ್ದೇನೆ. ಈ ಬಗ್ಗೆ ಪಕ್ಷದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.