ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ 1.30 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಪ್ರಭಾವಿ ವ್ಯಕ್ತಿಯಿಂದ ಚೆಕ್ ಮೂಲಕ ಲಂಚ ಪಡೆದು, ಲೋಕಾಯುಕ್ತ ಹಾಗೂ ಚುನಾವಣಾ ಆಯೊಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಿಂಗ್ಸ್ ಕೋರ್ಟ್ ನ ಎಲ್. ವಿವೇಕಾನಂದ ಎಂಬುವವರಿಂದ ಸಿದ್ದರಾಮಯ್ಯ 1.30 ಕೋಟಿ ರೂಪಾಯಿ ಚೆಕ್ ಮೂಲಕ ಲಂಚ ಪಡೆದಿದ್ದಾರೆ. 2014ರಲ್ಲಿ ಟರ್ಫ್ ಕ್ಲಬ್ ಉಸ್ತುವಾರಿಯಾಗಿ ವಿವೇಕಾನಂದ ಅವರನ್ನು ನೇಮಕ ಮಾಡಿದ್ದರು.
ಆದರೆ ತಾವು ಸಾಲ ಪಡೆದುಕೊಂಡಿದ್ದಾಗಿ ಚುನಾವಣಾ ಆಯೋಗಕ್ಕೆ ಸಿದ್ದರಾಮಯ್ಯ ಸುಳ್ಳು ಮಾಹಿತಿ ನೀಡಿದ್ದಾರೆ. ಯಾವುದೇ ವ್ಯಕ್ತಿಗೆ ಯಾವುದೇ ಹುದ್ದೆಗೆ ನೇಮಕಕ್ಕೆ ಪ್ರತಿಯಾಗಿ ಉಡುಗೊರೆ ಅಥವಾ ಚೆಕ್ ಪಡೆಯುವುದು ಕೇಂದ್ರ ಗೃಹ ಇಲಾಖೆ ನಿಯಮ ಉಲ್ಲಂಘನೆಯಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಾಯ್ದೆ 7, 8, 9,10, 1ರ ಅಡಿ ಸಿದ್ದರಾಮಯ್ಯ ಹಣ ಪಡೆದಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ನಾಳೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.