ಕೋಲಾರ: ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು, ಆದರೆ ಜನರು ದಡ್ಡರಲ್ಲ, ಅವರಿಗೆ ತಮ್ಮ ಕಷ್ಟ ಸುಖಕ್ಕೆ ಆಗುವವರು ಯಾರೆಂಬುದು ಗೊತ್ತಿದೆ. ಅವರನ್ನೇ ಆಯ್ಕೆ ಮಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಸಿ.ಟಿ. ರವಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜನರ ಉದ್ದಾರಕ್ಕಾಗಿ ಕೋಲಾರಕ್ಕೆ ಬಂದಿಲ್ಲ. ಯಾರೋ ಕೆಲವರ ಮಾತು ಕೇಳಿ ಕೋಲಾರ ಸುರಕ್ಷಿತ ಕ್ಷೇತ್ರ ಎಂದುಕೊಂಡು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಸಂದರ್ಭದಲ್ಲಿ ಬಂದು ಜನರ ಕಷ್ಟ ಆಲಿಸಿದ್ದರೆ ಸಹಾಯವಾಗುತ್ತಿತ್ತು. ಆದರೆ ಆಗ ಬರದೇ ಈಗ ವೋಟಿಗಾಗಿ ಬಂದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು, ಅಷ್ಟಕ್ಕೂ ಬಾದಾಮಿಯಲ್ಲಿ ಗೆದ್ದಿದ್ದು ನಿಜ ಆದರೆ ಅಲ್ಲಿ ಅವರಿಗೆ ಸಿಕ್ಕ ಲೀಡ್ ಎಷ್ಟು? ಸಿದ್ದರಾಮಯ್ಯ ಕೋಲಾರದ ಜನರ ಉದ್ದಾರಕ್ಕಾಗಿ ಬಂದಿದ್ದಾರೆ ಎಂದು ಯಾರೂ ಭಾವಿಸಬೇಡಿ. ಕೆಲವರ ಮಾತು ಕೇಳಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮತ್ತೆ ಟಿಪ್ಪು ಸುಲ್ತಾನ್ ವಿಚಾರ ಪ್ರಸ್ತಾಪಿಸಿದ ಸಿ.ಟಿ. ರವಿ, ಟಿಪ್ಪು ಹುಟ್ಟು ರಾಜನಲ್ಲ, ಒಡೆಯರ್ ಗೆ ಸೇರಿರುವ ಸಂಸ್ಥಾನದಲ್ಲಿ ಟಿಪ್ಪುವಿನ ತಂದೆ ಸಾಮಾನ್ಯ ಸೈನಿಕನಾಗಿದ್ದರು. ನಂತರ ಸೇನಾಧಿಪತಿಯಾದರು. ಮೋಸದಿಂದ ಒಡೆಯರ್ ಸಂಸ್ಥಾನ ಕಬಳಿಸಿದ್ದು ಟಿಪ್ಪು. ನಮ್ಮ ಆಡಳಿತ ಭಾಷೆಯಾಗಿರುವ ಕನ್ನಡವನ್ನು ಬಲವಂತವಾಗಿ ಬದಲಿಸಿ ಪಾರ್ಸಿ ಬಾಷೆಯನ್ನು ಹೇರಿದ, ರಾಜ-ರಾಣಿಯನ್ನು ಸೆರೆಮನೆಯಲ್ಲಿಟ್ಟ. ಸತ್ಯದ ಪರ ಧ್ವನಿ ಎತ್ತಿದವರ ನರಮೇಧ ಮಾಡಿದ. ಕರ್ನಾಟಕಕ್ಕೆ ಟಿಪ್ಪು ಕೊಡುಗೆ ಏನು ಎಂದು ವಿವರಿಸಲು ಯಾರೂ ತಯಾರಿಲ್ಲ. ಇದು ಕೊಡುಗೆನಾ? ಎಂದು ಪ್ರಶ್ನಿಸಿದರು.