ಬೀದರ್: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಲಿಂಗಾಯಿತ ನಾಯಕರನ್ನು ಸಿದ್ದರಾಮಯ್ಯ ಭ್ರಷ್ಟರು ಎಂದು ಕರೆದಿದ್ದಾರೆ. ಇಡೀ ಲಿಂಗಾಯಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಇನ್ನೊಂದೆಡೆ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿಯವರನ್ನು ಬಾಯಿಗೆ ಬಂದಂತೆ, ಕೆಟ್ಟದಾಗಿ ಬೈದಿದ್ದಾರೆ. ನಾಚಿಕೆಯಾಗಬೇಕು ಅವರಿಗೆ ಎಂದು ಕಿಡಿಕಾರಿದರು.
ರಾಜ್ಯ ಕಂಡ ಅತಿ ಭ್ರಷ್ಟ ಸರ್ಕಾರ ಸಿದ್ದರಾಮಯ್ಯನವರ ಆಡಳಿತಾವಧಿಯದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಇನ್ನು ಪ್ರಧಾನಿ ಮೋದಿಯವರನ್ನು ಕೆಟ್ಟ ಪದ ಬಳಸಿ ಖರ್ಗೆ ಟೀಕಿಸಿದ್ದಾರೆ. ಮೋದಿ ಎಂದರೆ ಕಾಂಗ್ರೆಸ್ ಗೆ ಸೋಲು ಎಂತಲೇ ಅರ್ಥ. ಕಾಂಗ್ರೆಸ್ ನಾಯಕರು ಹತಾಶೆಯಿಂದ ಕೆಟ್ಟದಾಗಿ ಮಾತನಾಡುತ್ತಾರೆ. ವಿಷವನ್ನು ಕುಡಿದು ಜನರಿಗೆ ಒಳಿತು ಮಾಡುವ ನಾಯಕ ಮೋದಿಯವರು ಎಂದು ಹೇಳಿದರು.