ಬೆಂಗಳೂರು: ಉಪ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಸಿಂದಗಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಹಾನಗಲ್ ನಲ್ಲಿ ಬಿಜೆಪಿ ಸೋಲನಭವಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಉಪ ಚುನಾವಣಾ ಫಲಿತಾಂಶ ಮುಂಬರುವ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಸಿಂದಗಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಗೆಲುವು ಸಾಧಿಸಿದ್ದಾರೆ. 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಸಿಂದಗಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಹಾನಗಲ್ ಕ್ಷೇತ್ರದಲ್ಲಿ ಕೂಡ ನಮ್ಮ ಅಭ್ಯರ್ಥಿ ಶಿವರಾಜ್ ಸಜ್ಜನರ್ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಅಲ್ಪ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಹಾಗಂತ ಕಾಂಗ್ರೆಸ್ ನಾಯಕರು, ವಿಪಕ್ಷ ನಾಯಕ ಸಿದ್ದರಾಮಯ್ಯ ಏನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಬೀಗುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದರು.
ಸಾಮೂಹಿಕ ನಾಯಕತ್ವದಲ್ಲಿ ಉಪಚುನಾವಣೆ ಎದುರಿಸಿದ್ದೇವೆ. ಇಲ್ಲಿ ಸಿಎಂ ಬೊಮ್ಮಾಯಿ ನಾಯಕತ್ವದ ಪ್ರಶ್ನೆ ಉದ್ಭವವಾಗಲ್ಲ, ಚುನಾವಣೆ ಎಂದ ಮೇಲೆ ಸೋಲು-ಗೆಲುವು ಸಹಜ, ಸೋಲಾಗಲಿ, ಗೆಲುವಾಗಲಿ ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕು ಹೊರತು ಯಾವುದೇ ಒಬ್ಬ ವ್ಯಕ್ತಿಯನ್ನು ಆರೋಪಿಸುವುದು ಸರಿಯಲ್ಲ. ಎಲ್ಲರೂ ಕುಳಿತು ಸೋಲಿನ ಬಗ್ಗೆ ಚರ್ಚೆ ಮಾಡುತ್ತೇವೆ. ಹಾನಗಲ್ ನಲ್ಲಿ ಆದ ಸಣ್ಣ ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ ಎಂದು ಹೇಳಿದರು.