ಮೈಸೂರು: 5 ವರ್ಷಗಳ ಕಾಲ ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯನವರು ಇಂದು ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಸ್ಥಿತಿ ನೋಡಿ ನನಗೆ ಅನುಕಂಪ ಬರುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕೋಲಾರ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದ ಸಿದ್ದರಾಮಯ್ಯನವರು ಕ್ಷೇತ್ರ ಸೇಫ್ ಅಲ್ಲ ಎಂದು ಹೈಕಮಾಂಡ್ ಹೆಸರು ಹೇಳಿ ಹಿಂದೆ ಸರಿದಿದ್ದಾರೆ. ಈಗ ಮತ್ತೆ ಕ್ಷೇತ್ರ ಹುಡುಕುತ್ತಿದ್ದಾರೆ. ನಾನು ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತನಾಡುತ್ತಿಲ್ಲ. ಆದರೆ ಒಬ್ಬ ಅನುಭವಿ ರಾಜಕಾರಣಿಯಾದ ಸಿದ್ದರಾಮಯ್ಯನಂತವರಿಗೆ ರಾಜ್ಯದಲ್ಲಿ ಇಂತಹ ಆತಂಕ ಎದುರಾಗಿರುವುದು ನೋಡಿ ನೋವಾಗುತ್ತಿದೆ ಎಂದರು.
ಸಿದ್ದರಾಮಯ್ಯ ಈ ರಾಜ್ಯದಲ್ಲಿ ಎರಡು ಬಾರಿ ಉಪಮುಖ್ಯಮಂತ್ರಿಯಾಗಿದ್ದವರು, 5 ವರ್ಷಗಳ ಕಾಲ ಪೂರ್ಣಾವಧಿ ಸಿಎಂ ಆಗಿದ್ದವರು, 13 ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಮಾಡಿದವರು. ಒಬ್ಬ ಅನುಭವಿ ಹಿರಿಯ ರಾಜಕಾರಣಿ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನ್ನು ಮುನ್ನಡೆಸುವಂತಹ ಶಕ್ತಿಯುಳ್ಳ ನಾಯಕರು. ಅಂತವರು ಕಳೆದ ಒಂದು ವರ್ಷದಿಂದ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯನವರಿಗೆ ಹೀಗಾದರೆ ಇನ್ನು ಸಣ್ಣಪುಟ್ಟ ನಾಯಕರ ಸ್ಥಿತಿ ಏನಿರಬೇಕು ? ಸಿದ್ದರಾಮಯ್ಯನವರನ್ನು ನೋಡಿ ಅನುಕಂಪ ಬರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.