ಬೆಂಗಳೂರು: ಕಾಂಗ್ರೆಸ್ ನಾಯಕರ ಬೀದಿ ನಾಟಕ ಈಗ ಒಂದೊಂದಾಗಿ ಬಯಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಧಿಕಾರದ ಕಿತ್ತಾಟಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ನಾವು ಹೇಳಿದ್ದೆವು. ಆದರೆ ಆಗ ಕಾಂಗ್ರೆಸ್ ನಾಯಕರು ಇಲ್ಲ, ನಾವೆಲ್ಲರೂ ಒಂದೇ ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದಿದ್ದರು. ಆದರೆ ಈಗ ಇವರ ಬೀದಿ ನಾಟಕ ಬಯಲಾಗುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ, ಅಶೋಕ್ ಪಟ್ಟಣಶಟ್ಟಿ ಪಿಸುಮಾತುಗಳು, ಡಿಕೆಶಿ, ಸಿದ್ದರಾಮಯ್ಯ ಅವರ ಮುಸುಕಿನ ಗುದ್ದಾಟ ಎಲ್ಲವೂ ಬಹಿರಂಗವಾಗುತ್ತಿದೆ. ಕಾಂಗ್ರೆಸ್ ನಾಯಕರು ಬೀದಿ ನಾಟಕವಾಡುತ್ತಾ ಮತ್ತೆ ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಹಾಳುಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯನವರೇ ಆರೋಪಿಸುತ್ತಿದ್ದಾರೆ. ನಾಯಕರ ನಡುವೆ ಒಳಜಗಳ ನಡೆಯುತ್ತಲೇ ಇದೆ. ಅವರು ಹೀಗೆ ಜಗಳವಾಡುತ್ತಿದ್ದರೆ ನಮಗೆ ಒಳ್ಳೆಯದು ಎಂದು ಹೇಳಿದರು.