ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ವಿಧಾನಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲೇ ಬಿಲ್ ಗೆ ಸಿದ್ಧತೆ ನಡೆಸಲಾಗಿತ್ತು ಎಂಬ ಬಿಜೆಪಿ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ಅಂತಹ ಯಾವುದೇ ಸಿದ್ಧತೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 2016ರಲ್ಲಿ ಕಾನೂನು ಆಯೋಗದ ದಾಖಲೆ ಸಚಿವ ಸಂಪುಟಕ್ಕೆ ಬಂದಿಲ್ಲ. ಸಂಪುಟದಲ್ಲಿ ಚರ್ಚೆಯೇ ಆಗಿಲ್ಲ. ಒಪ್ಪಿಗೆಯೂ ದೊರೆತಿಲ್ಲ ಎಂದರು. ನಾವು ಒಪ್ಪಿಗೆ ಪಡೆದು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ವಿಧೇಯಕ ಮಂಡಿಸುತ್ತೇವೆ. ಆದರೆ ನನ್ನ ಅವಧಿಯಲ್ಲಿ ಅಂತಹ ಪ್ರಕ್ರಿಯೆ ನಡೆದಿಲ್ಲ. ನಮಗೆ ಆ ಬಿಲ್ ತರುವಂತಹ ಯಾವುದೇ ಉದ್ದೇಶವಿರಲಿಲ್ಲ ಎಂದು ತಿಳಿಸಿದರು.
ಗುಲಾಬಿ ನೀಡಿ ಕೈ ಮುಗಿದು ʼಬಂದ್ʼ ಗೆ ಬೆಂಬಲ ಕೇಳಿದ ಕನ್ನಡ ಪರ ಹೋರಾಟಗಾರರು..!
2016ರ ಬಳಿಕ ಎರಡು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಈ ವಿಧೇಯಕ ಮಂಡಿಸುವ ಬಗ್ಗೆ ನಾವು ಮುಂದಾಗಿರಲಿಲ್ಲ. ಕಾರಣ ನಮಗೆ ಬಿಲ್ ತರುವ ಉದ್ದೇಶವಿರಲಿಲ್ಲ. ಇನ್ನೊಂದು ವಿಚಾರವೆಂದರೆ ನಾವು ಮಾಡಿದ ಬಿಲ್ ಗೂ ಈಗ ಸರ್ಕಾರ ಮಂಡಿಸಿದ ಬಿಲ್ ಗೂ ಅಜಗಜಾಂತರ ವ್ಯತ್ಯಾಸವಿದೆ. ಮದುವೆ ವಿಚಾರ ಪ್ರಸ್ತಾಪ ಮಾಡಿಲ್ಲ. ಇನ್ನು ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲೂ ಒಂದು ಬಿಲ್ ಜಾರಿಗೆ ತಂದಿದ್ದಾರೆ. ಅದನ್ನೇ ಕಟ್ ಆಂಡ್ ಪೇಸ್ಟ್ ಮಾಡಲಾಗಿದೆ. ಗುಜರಾತ್ ಗೆ ಕರಡು ಪ್ರತಿ ನೀಡಿದವರೇ ರಾಜ್ಯಕ್ಕೂ ನೀಡಿದಂತಿದೆ ಎಂದು ಕಿಡಿಕಾರಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಸರ್ಕಾರದ ಉದ್ದೇಶ ಸರಿಯಿಲ್ಲ. ಮಹಿಳೆಯರು, ಮಕ್ಕಳು, ಬುದ್ಧಿಮಾಂಧ್ಯರು, ಎಸ್ ಸಿ ಎಸ್ ಟಿ, ಮತಾಂತರ ಮಾಡಿದರೆ ಶಿಕ್ಷೆ ಪ್ರಮಾಣ ಹೆಚ್ಚು ಎಂದು ಹೇಳಲಾಗುತ್ತಿದೆ. ಇದು ಯಾವ ಕಾನೂನಿನಲ್ಲಿದೆ? ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು ಎಂದಿದೆ. ಹೀಗಿರುವಾಗ ರಾಜ್ಯ ಸರ್ಕಾರ ಶಿಕ್ಷೆ ಪ್ರಮಾಣದಲ್ಲಿ ವ್ಯತ್ಯಾಸ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.