ಸಿದ್ದರಾಮಯ್ಯನವರು ಮಳೆಹಾನಿ ಪ್ರದೇಶಗಳ ಪರಿಶೀಲನೆಗೆಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಮಡಿಕೇರಿಯಲ್ಲಿ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಸಾವರ್ಕರ್ ವಿರುದ್ಧ ಸಿದ್ದರಾಮಯ್ಯ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.
ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಕೋಲಾಹಲಕ್ಕೆ ಕಾರಣವಾಗಿತ್ತು. ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಪೊಲೀಸರು ಭದ್ರತೆ ನೀಡಲು ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು.
ಇದೀಗ ಮೊಟ್ಟೆ ಎಸೆದ ಆರೋಪಿಯನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದು ಈತ ಅಪ್ಪಚ್ಚು ರಂಜನ್ ಅವರ ಆಪ್ತ ಎಂದು ತಿಳಿದುಬಂದಿದೆ. ಸೋಮವಾರಪೇಟೆಯ ಲೋಡರ್ಸ್ ಕಾಲೋನಿಯ ಸಂಪತ್ ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಅಪ್ಪಚ್ಚು ರಂಜನ್ ಅವರ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ.