ರಾಯಚೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ನಡೆದ ಮೊಟ್ಟೆ ಎಸೆತ ಪ್ರಕರಣ ಖಂಡನೀಯ. ಇಂತಹ ಪ್ರತಿಭಟನೆ ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಗೌರವ ತರುವಂತದ್ದಲ್ಲ, ಇದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಕೆಲಸದಿಂದ ಏನೂ ಸಾಧಿಸಲು ಆಗಲ್ಲ. ಶ್ರೀಕೃಷ್ಣ ಪರಮಾತ್ಮನ ಸಂದೇಶದ ಪ್ರಕಾರ ಧರ್ಮದ ಹಾದಿಯಲ್ಲಿ ನಾಡನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.
ನಾಡಿನ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ, ಜನರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಸರ್ಕಾರ ಮಾಡಲು ಸಾಕಷ್ಟು ಕೆಲಸಗಳಿವೆ ಅವೆಲ್ಲವನ್ನೂ ಬಿಟ್ಟು ಈ ರೀತಿ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಜನರೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಸಾವರ್ಕರ್ ಫೋಟೋ ವಿವಾದ ವಿಚಾರವಾಗಿ ನಮ್ಮ ಮುಂದೆ ಇಲ್ಲದವರ ಬಗ್ಗೆ ನಾವು ಹುಟ್ಟುವ ಮೊದಲೇ ನಡೆದ ಘಟನೆಗಳ ಬಗ್ಗೆ ಅವರವರ ದೃಷ್ಟಿಕೋನದಲ್ಲಿ ಇತಿಹಾಸ ಬರೆಯುತ್ತಾರೆ. ಆ ವಿಷಯವನ್ನು ಕಿದಕಿ ಕೆದಕಿ ಅಶಾಂತಿ ವಾತಾವರಣ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಗಾಂಧಿ ಕೊಂದವರ ಫೋಟೋ ಹಾಕಿಕೊಂಡು ಓಡಾಡುತ್ತಾರೆ. ಆದರೆ ದೇಶಕ್ಕಾಗಿ ಕೊಡುಗೆ ಕೊಟ್ಟವರ ಬಗ್ಗೆ ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.