ಕಲಬುರ್ಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಯಾವುದೇ ಆದರ್ಶವಾಗುವಂತಹ ಗುಣಗಳಿಲ್ಲ, ಯುವಕರಿಗೆ ಮಾದರಿಯೂ ಅಲ್ಲ. ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯ ಅವರಿಂದ ಕಲಿಯುವಂತದ್ದೇನಿದೆ? ಎಂದು ಸಚಿವ ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಅವರಲ್ಲಿ ಯುವ ರಾಜಕಾರಣಿಗಳಿಗೆ ಆದರ್ಶವಾಗುವ ಗುಣಗಳಿಲ್ಲ. ಅವರಿಂದ ಯುವ ಜನತೆಗೆ ಯಾವುದೇ ಸಂದೇಶವಿಲ್ಲ. ಯುವ ಜನತೆ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವುದು ಕಡಿಮೆ. ಮುತ್ಸದ್ದಿ ರಾಜಕಾರಣಿ ಎಂಬ ಯಾವುದೆ ಲಕ್ಷಣಗಳಿಲ್ಲ. ಪ್ರತಿಬಾರಿ ಸಮಾಜಕ್ಕೆ ವಿರುದ್ಧ ಹೇಳಿಕೆ ಕೊಡುತ್ತಾರೆ. ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ತೆರಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದು ತಪ್ಪು ಎಂದು ನಾವು ಹೇಳಿಲ್ಲ. ದೇಗುಲಕ್ಕೆ ಹೇಗೆ ಹೋಗಬೇಕು ಎಂಬುದು ಅವರವರ ಭಾವನೆ. ಅವರವರ ಭಾವನೆಗೆ ತಕ್ಕಂತೆ ಎಲ್ಲರೂ ನಡೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರಿಗೆ ಯಾವ ಭಾವನೆ ಇದೆ ಗೊತ್ತಿಲ್ಲ. ಒಳಗೊಂದು ಹೊರಗೊಂದು ಮಾತನಾಡುತ್ತಾರೆ ಎಂದು ಹೇಳಿದರು.