ಶಿವಮೊಗ್ಗ: ಕಾಂಗ್ರೆಸ್ ನಿಂದ ಪೇಸಿಎಂ ಪೋಸ್ಟರ್ ಅಭಿಯಾನ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕರಾಗಿ ಇಂತಹ ವರ್ತನೆ ಶೋಭೆತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ, ಸಿಎಂ ವಿರುದ್ಧ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪೋಸ್ಟರ್ ಅಂಟಿಸಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ದೂರು ನೀಡಿದ್ದೇವೆ. ವಿಪಕ್ಷ ನಾಯಕರಾಗಿ ಸ್ವಲ್ಪ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.
ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಹಗರಣಗಳು ನಡೆದಿದ್ದವು. ತಲೆಮಾರುಗಳಿಗಾಗುವಷ್ಟು ಹಣ ಮಾಡಿದ್ದೇವೆ ಎಂಬ ರಮೇಶ್ ಕುಮಾರ್ ಹೇಳಿಕೆ ಯಾರೂ ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಹಗಲು ದರೋಡೆ ಮಾಡಿದರು. ಶಿಕ್ಷಕರ ಅಕ್ರಮದ ಬಗ್ಗೆ ನಾಡಿನ ಜನತೆಗೆ ಮೊದಲು ಉತ್ತರ ನೀಡಲಿ. ಅಕ್ರಮದ ಬಗ್ಗೆ ತನಿಖೆಯಾದರೆ ಎಲ್ಲವೂ ಹೊರಬರುತ್ತದೆ ಎಂದು ಗುಡುಗಿದರು.