ಬೆಂಗಳೂರು: ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿದ್ದವರು ಕೆಲವರು ಈಗ ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವುದು ಹಲವು ಅನುಮಾನಕ್ಕೆ ಪುಷ್ಠಿ ನೀಡಿದೆ. ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ? ಪಕ್ಷಾಂತರವೋ? ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.
ಸಿದ್ದರಾಮಯ್ಯನವರ ಆಪ್ತ ವಲಯದವರು ಆಪ್ ಹಾಗೂ ಸಮಾಜವಾದಿ ಪಕ್ಷದ ನಾಯಕರ ಭೇಟಿಯಾಗಿರುವುದು ವ್ಯವಸ್ಥಿತ ನಡೆ. ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದ ಬಳಿಕ ಕರ್ನಾಟಕದಲ್ಲೂ ಇದರ ಪ್ರತಿಫಲನ ಕಾಣಬಹುದೇ? ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.
ನಮ್ಮ ಸಂಪರ್ಕದಲ್ಲಿ ಆ ಪಕ್ಷದವರಿದ್ದಾರೆ, ಈ ಪಕ್ಷದವರಿದ್ದಾರೆ ಎಂದು ಸಿದ್ದರಾಮಯ್ಯ ಕಳೆದ ಕೆಲ ದಿನಗಳಿಂದ ನಿರಂತರ ಬುರುಡೆ ಬಿಟ್ಟಾಗಲೇ ಅನುಮಾನವಿತ್ತು. ಈಗ ನೋಡಿದರೆ ತಮ್ಮ ಆಪ್ತರನ್ನೇ ಬೇರೆಯವರ ಸಂಪರ್ಕಕ್ಕೆ ಬಿಟ್ಟಿದ್ದಾರೆ. ಮತ್ತೊಮ್ಮೆ ವಲಸೆ ವೇದಿಕೆ ಸೃಷ್ಟಿಸಿಕೊಳ್ಳುತ್ತಿದ್ದೀರಾ? ಸುಳ್ಳು ಹೇಳುವುದರಲ್ಲಿ ಸದಾ ಸಿದ್ಧರಿರುವ ಸಿದ್ದರಾಮಯ್ಯನವರ ಸುಳ್ಳಿನ ಕೊಡ ಇನ್ನೇನು ತುಂಬಲಿದೆ 2023ರಲ್ಲಿ ಸ್ಪಷ್ಟ ಉತ್ತರ ಸಿಗಲಿದೆ. ಸಿದ್ದರಾಮಯ್ಯನವರೇ ಪಲಾಯನಕ್ಕೆ ಸಿದ್ಧರಾಗಿ ಎಂದು ವ್ಯಂಗ್ಯವಾಡಿದೆ.
ಇಷ್ಟು ದಿನ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೇ ಸಿಎಂ ಗಾದಿಗೆ ಕಣ್ಣಿಟ್ಟಿದ್ದರು. ಈಗ ಎಂ.ಬಿ.ಪಾಟೀಲ್ ಸೇರಿದ್ದಾರೆ. ಮುಂದಿನ ದಿನ ಕಾಂಗ್ರೆಸ್ ಕಲಹ ಮತ್ತಷ್ಟು ಉಲ್ಬಣಗೊಳ್ಳಲಿದೆ. ಕಾಂಗ್ರೆಸ್ ಪರಿಸ್ಥಿತಿ ಈಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಕಾಂಗ್ರೆಸ್ ಸೇರುವವರ ಪಟ್ಟಿ ನಮ್ಮಲ್ಲಿದೆ ಎಂದು ಹೇಳುವ ಕಾಂಗ್ರೆಸ್ ನಾಯಕರೇ ಮೊದಲು ನಿಮ್ಮ ಪಕ್ಷದ ಬಾಗಿಲು ಭದ್ರಪಡಿಸಿಕೊಳ್ಳಿ. ಕಾಂಗ್ರೆಸ್ ಕಲಹದಿಂದಾಗಿ ಇಬ್ರಾಹಿಂ ಪಕ್ಷ ತೊರೆಯುತ್ತಿದ್ದಾರೆ. ಪಕ್ಷಕ್ಕೆ ಬೀಗ ಜಡಿಯುವ ಸಮಯ ದೂರವಿಲ್ಲ ಎಂದು ಹೇಳಿದೆ.