ಬೆಂಗಳೂರು; ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಮತ್ತೆ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ ಘಟಕ, ಸಿದ್ದರಾಮಯ್ಯನವರೇ ಈ ಬಾರಿ ನೀವು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸೋಲು ಕಟ್ಟಿಟ್ಟ ಬುತ್ತಿ. ಹೀಗಾಗಿ ಇದೇ ನಿಮ್ಮ ಕೊನೆಯ ಚುನಾವಣೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಸಿದ್ದರಾಮಯ್ಯ ಸೋಲಿಗೆ ಯೋಗದಾನ ನೀಡುವವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ ಎಂಬುದನ್ನು ಮರೆಯಬೇಡಿ. ಕೋಲು ನೀವು ಹಿಡಿಯಬೇಕಾಗಿಲ್ಲ, ಜನರೇ ಹಿಡಿಸುತ್ತಾರೆ. ಅದಕ್ಕಾಗಿ 2023 ರ ವರೆಗೆ ಕಾಯಬೇಡಿ. ಈಗಲೇ ಕೋಲು ಹುಡುಕಿಕೊಳ್ಳಿ. ನಿಮ್ಮದೇ ಪಕ್ಷದ ನಾಯಕರು ಹಾಗೂ ಮತದಾರರು ನಿಮ್ಮ ಕೈ ಹಿಡಿಯುವುದಿಲ್ಲ. ಅಂತಿಮವಾಗಿ ನಿಮ್ಮ ಬಳಿ ಉಳಿಯುವುದು ಕೋಲಷ್ಟೇ! ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಕಿಡಿಕಾರಿದೆ.
ಪ್ರತಿ ಬಾರಿ ಚುನಾವಣೆ ಬಂದಾಗಲೂ ಸಿದ್ದರಾಮಯ್ಯ ಅವರದ್ದು ಅದೇ ರಾಗ, ಅದೇ ಹಾಡು. ಇದೇ ನನ್ನ ಕೊನೆಯ ಚುನಾವಣೆ ಎನ್ನುವುದು ಅಭ್ಯಾಸವಾಗಿ ಬಿಟ್ಟಿದೆ. ಹೀಗೇ ಹೇಳುತ್ತಿರಿ, ಜನರೇ ನಿಮ್ಮ ರಾಜಕೀಯಕ್ಕೆ ಅಂತ್ಯ ಹಾಡುತ್ತಾರೆ. ಬಾದಾಮಿಯಲ್ಲಿ ಕೂದಲೆಳೆಯ ಅಂತರದಲ್ಲಿ ಜೀವದಾನ ಪಡೆದಿರಿ. ಮುಂದೆ ನಿಮ್ಮವರೂ ನಿಮ್ಮನ್ನು ಕಾಪಾಡಲಾರರು!
ಸಿದ್ದರಾಮಯ್ಯನವರ ಬಗಲಲ್ಲೇ ಶತ್ರುಗಳಿದ್ದಾರೆ ಎಂದು ಪಟ್ಟಿ ಕೊಟ್ಟಿರುವ ಬಿಜೆಪಿ, ಪರಮೇಶ್ವರ, ಡಿಕೆಶಿ, ಮುನಿಯಪ್ಪ, ಖರ್ಗೆ, ದೇಶಪಾಂಡೆ, ಶ್ಯಾಮನೂರು ಶಿವಶಂಕರಪ್ಪ ಹೀಗೆ ಪಟ್ಟಿ ದೊಡ್ಡದಿದೆ. ನಿಮ್ಮ ಸೋಲಿಗೆ ಸುಪಾರಿ ಕೊಡುವವರನ್ನು ಅನ್ಯ ಪಕ್ಷದಲ್ಲಿ ಹುಡುಕುವ ಅಗತ್ಯವಿಲ್ಲ. ಚಾಮುಂಡೇಶ್ವರಿಯಲ್ಲಿ ಸೋಲಾಯ್ತು, ಬಾದಾಮಿಯಲ್ಲಿ ಸೋಲುವ ಭೀತಿ. ಸಿದ್ದರಾಮಯ್ಯನವರೇ, ಮುಂದೆ ನೀವು ಚುನಾವಣೆಗೆ ನಿಲ್ಲಬಹುದು ಆದರೆ ಗೆಲ್ಲಲು ಸಾಧ್ಯವಿಲ್ಲ. ನಿಮ್ಮ ಜೀವನದಲ್ಲಿ ಚುನಾವಣಾ ಪರ್ವ ಮುಗಿದ ಅದ್ಯಾಯ. ನಿಮ್ಮ ‘ಕೊನೆಯ’ ಚುನಾವಣೆಯಲ್ಲಿ ಸೋಲುವುದು ಶತಸಿದ್ಧ. ಇದು ನಮ್ಮ ಮಾತಲ್ಲ, ನಿಮ್ಮದೇ ಪಕ್ಷದ ನಾಯಕರ ಅಭಿಲಾಷೆ ಎಂದು ಹೇಳಿದೆ.