ಬೆಂಗಳೂರು: ವಿಪಕ್ಷನಾಯಕ ಸಿದ್ದರಾಮಯ್ಯನವರಿಗೆ ಟಿಪ್ಪು ಜಯಂತಿ ಮಾಡಿದ ಶಾಪ ತಟ್ಟಿದೆ. ಮುಂಬರುವ ಚುನಾವಣೆಯಲ್ಲಿ ಅವರನ್ನು ಜನರು ಕಾಡಿಗೆ ಕಳುಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಬಿಜೆಪಿಗೆ ಬರುತ್ತಿದ್ದಾರೆ. ಚುನಾವಣೆ ವೇಳೆ ಕಾಂಗ್ರೆಸ್ ಮನೆ ಖಾಲಿಯಾಗಲಿದೆ. ಜೆಡಿಎಸ್ ಪಕ್ಷ ರಾಜ್ಯದಲ್ಲಿಯೇ ಇರುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಮಾಡಿದ್ದರಿಂದ ಸಿದ್ದರಾಮಯ್ಯನವರಿಗೆ ಶಾಪ ತಟ್ಟಿದೆ. ಹಾಗಾಗಿ ಅವರಿಗೆ 2023ರ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಸಿಗುತ್ತಿಲ್ಲ. ಸಿದ್ದರಾಮಯ್ಯಗೆ ತಾಕತ್ತಿದ್ದರೆ ಮತ್ತೆ ಬಾದಾಮಿಯಲ್ಲಿ ಸ್ಪರ್ಧೆ ಮಾಡಲಿ ಎಂದು ಸವಾಲು ಹಾಕಿದರು.
ಬೇಡವಾದ ಟಿಪ್ಪು ಜಯಂತಿ ಮಾಡಿ ಮೂವರ ಹತ್ಯೆಗೆ ಕಾರಣರಾದವರು ಸಿದ್ದಾರಾಮಯ್ಯ, ಸಿದ್ದರಾಮಯ್ಯ ಗೋಹತ್ಯೆ ಪರ ನಿಂತ ಖಳನಾಯಕ. ಅವರ ಅವಧಿಯಲ್ಲಿ ಪಿ ಎಫ್ ಐ ಸಂಘಟನೆ ವಿಜೃಂಭಿಸಿತು. ತಮ್ಮದೇ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿಸಲಾಯಿತು. ಅನೈತಿಕ ಮೈತ್ರಿ ಮಾಡಿಕೊಂಡು ಸಿದ್ದರಾಮಯ್ಯ, ಹೆಚ್ ಡಿ ಕೆ ಸರ್ಕಾರ ರಚನೆ ಮಾಡಿದರು. ಅಧಿಕಾರ ಸಿಕ್ಕಿದರೂ ಜನಪರ ಕೆಲಸ ಮಾಡದೇ ಕಾಲಹರಣ ಮಾಡಿದರು. ಈಗ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.