ಬೆಂಗಳೂರು: ತನ್ನ ವಿರುದ್ಧ ಸಿಡಿ ಷಡ್ಯಂತ್ರ ನಡೆಸಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ಗಂಭೀರವಾಗಿ ಆರೋಪ ಮಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ ಸುದೀರ್ಘ ಪತ್ರದ ಮೂಲಕ ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡಿದ್ದಾರೆ. ಪತ್ರದಲ್ಲಿ ಹಲವು ವಿಚಾರಗಳನ್ನು ಜಾರಕಿಹೊಳಿ ಉಲ್ಲೇಖಿಸಿದ್ದಾರೆ.
ಹಲವು ರಾಜಕಾರಣಿಗಳ ಸಿಡಿಗಳು ಇವೆ, ಉನ್ನತ ಅಧಿಕಾರಿಗಳ ಸಿಡಿಗಳೂ ಇವೆ. ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಐಎ ಎಸ್, ಐಪಿಎಸ್ ಅಧಿಕಾರಿಗಳಿಗೂ ಬೆದರಿಕೆ ಹಾಕಿದ್ದಾರೆ. ಸಿಡಿ ಮೂಲಕ ರಾಜಕಾರಣಿಗಳನ್ನು ಕಂಟ್ರೋಲ್ ಮಾಡಲಾಗುತ್ತಿದೆ. ದೇವನಹಳ್ಳಿ ರೇಡ್ ನಲ್ಲಿ ಸಿಕ್ಕ ಸಿಡಿಗಳ ಬಗ್ಗೆಯೂ ರಮೇಶ್ ಜಾರಕಿಹೊಳಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಒಟ್ಟಾರೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.