ಬೆಂಗಳೂರು: ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಬಿ.ಎಸ್.ಯಡಿಯೂರಪ್ಪ ಪರ ಬ್ಯಾಟ್ ಬೀಸಿರುವ ಕಾಂಗ್ರೆಸ್ ಹಿರಿಯ ನಾಯಕ ಎಂ.ಬಿ.ಪಾಟೀಲ್, ಬಿಜೆಪಿಯಲ್ಲಿ ಸಿಎಂ ಬಿ ಎಸ್ ವೈ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಇದರಿಂದ ಇಡೀ ಲಿಂಗಾಯಿತ ಸಮುದಾಯಕ್ಕೆ ನೋವಾಗಿದೆ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕೊಡುಗೆ ಅಪಾರ. ಸಿಎಂ ಆಗಿ ಅವರನ್ನು ಮುಂದುವರೆಸುವುದು ಅಥವಾ ಬದಲಾವಣೆ ಮಾಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ಅವರನ್ನು ಪಕ್ಷದಲ್ಲಿ ನಡೆಸುಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದು ನಿನ್ನೆಯಷ್ಟೇ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಎಂ.ಬಿ.ಪಾಟೀಲ್ ಇಂದು ಕೂಡ ಇದೇ ವೀಚಾರ ಪುನರುಚ್ಛರಿಸಿದ್ದಾರೆ.
ಯಡಿಯೂರಪ್ಪನವರನ್ನು ಗೌರವಯುತವಾಗಿ ಬಿಜೆಪಿ ನಡೆಸಿಕೊಳ್ಳುತ್ತಿಲ್ಲ. ಅವರನ್ನು ನಡೆಸಿಕೊಡುತ್ತಿರುವ ರೀತಿ ನನಗೆ, ಇಡೀ ಲಿಂಗಾಯತ ಸಮುದಾಯದವರಿಗೆ ನೋವಾಗುತ್ತಿದೆ. ಒತ್ತಾಯ ಪೂರ್ವಕವಾಗಿ ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಿ ಅವರನ್ನು ಬದಲಾವಣೆ ಮಾಡುವ ಯತ್ನ ನಡೆದಿದೆ. ಪಕ್ಷದ ನಾಯಕರಿಂದಲೇ ಯಡಿಯೂರಪ್ಪ ಮೇಲೆ ಹಲವು ವಿಧದಲ್ಲಿ ಒತ್ತಡಗಳನ್ನು ಹೇರಿ, ಅವರು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿ, ರಾಜೀನಾಮೆಯಂತಹ ಪ್ರಯತ್ನ ನಡೆಸಲಾಗುತ್ತಿದೆ. ಯಡಿಯೂರಪ್ಪನವರ ಹಿರಿತನಕ್ಕೆ, ಸಮರ್ಥ ನಾಯಕತ್ವ ಹಾಗೂ ಅವರು ನಿಭಾಯಿಸುತ್ತಿರುವ ಆಡಳಿತ ವೈಖರಿಗಾದರೂ ಗೌರವ ನೀಡಬೇಕು. ಆದರೆ ಬಿಜೆಪಿಯಲ್ಲಿ ಹಾಗೆ ನಡೆಸಿಕೊಳ್ಳಲಾಗುತ್ತಿಲ್ಲ ಎಂಬುದು ಜನರಿಗೂ ಅರ್ಥವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಶಾಸಕ ಮಹೇಶ್ ಹೆಸರಲ್ಲಿ ಶಾಸಕಿ ರೂಪಾಲಿ ನಾಯ್ಕ್ ಗೆ ವಂಚನೆ: ಅರೆಸ್ಟ್
ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ ಮಾತ್ರವಲ್ಲ ರಾಜ್ಯದ ಮುಖ್ಯಮಂತ್ರಿ ಎಂಬ ಭಾವನೆಯಿಂದ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಅಷ್ಟೇ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಹೊರತು ಇದಕ್ಕೂ ಕಾಂಗ್ರೆಸ್ ಅಭಿಪ್ರಾಯಗಳಿಗೂ ಯಾವುದೇ ಸಂಬಂಧವಿಲ್ಲ, ಇದನ್ನು ಬೇರೆ ಅರ್ಥದಲ್ಲಿ ಪರಿಗಣಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.