ಬೆಂಗಳೂರು: ಸಿಎಂ ಯಡಿಯೂರಪ್ಪನವರು ಈ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಮೊದಲೇ ಸರ್ಕಾರದ ಬಗ್ಗೆ ಜನರಿಗೆ ಬೇಸರವಿದೆ. ಇಂತಹ ಹೇಳಿಕೆಯಿಂದ ಜನ ಇನ್ನಷ್ಟು ಗೊಂದಲಕ್ಕೀಡಾಗುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇದು ಹಣ ಹೂಡಿಕೆ ಮಾಡಿ ಬಂದಿರುವ ಸರ್ಕಾರ. ಇಲ್ಲಿ ಜಟಾಪಟಿಗಳು ಸಾಮಾನ್ಯ. ಕೋವಿಡ್ ನಂತಹ ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪನವರು ರಾಜೀನಾಮೆ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಈ ಸಂದರ್ಭದಲ್ಲಿ ಯಾರೇ ಸಿಎಂ ಆದರೂ ರಾಜ್ಯದ ಹಣೆಬರಹ ಬದಲಾವಣೆಯಾಗಲ್ಲ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ನಾಯಕರನ್ನು ಸೃಷ್ಟಿ ಮಾಡುವ ಶಕ್ತಿಯಿದೆ. ಯಾವುದೇ ಪಕ್ಷಕ್ಕೆ ವ್ಯಕ್ತಿ ಮುಖ್ಯವಲ್ಲ. ಇನ್ನು ನಾಯಕತ್ವ ಎಂಬುದನ್ನು ಜನ ಸೃಷ್ಟಿಸುತ್ತಾರೆ. ದೇಶ, ರಾಜ್ಯದಲ್ಲಿ ಪರ್ಯಾಯ ನಾಯಕರು ಇದ್ದೇ ಇರುತ್ತಾರೆ. ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಿಕೊಳ್ಳಬೇಕು ಹೊರತು ಬಹಿರಂಗವಾಗಿಯಲ್ಲ. ನಾಲ್ಕು ಗೋಡೆ ಮಧ್ಯೆ ಕುಳಿತು ಚರ್ಚೆ ಮಾಡಿಕೊಳ್ಳಲಿ ಅದನ್ನು ಬಿಟ್ಟು ಬಹಿರಂಗವಾಗಿ ಹೇಳಿಕೆ ನೀಡುತ್ತಾ ಹೋದರೆ ಹೊಸ ನಾಯಕರ ಸೃಷ್ಟಿಗೆ ಕಾರಣವಾಗುತ್ತೆ ಎಂದು ಹೇಳಿದರು.