ಹಾವೇರಿ: ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚಲು ಕಳೆದ 5 ವರ್ಷದಲ್ಲಿ 20.060 ಕೋಟಿ ಖರ್ಚು ಮಾಡಿದ್ದೇವೆ ಎಂದು ಕಳೆದ ಅಧಿವೇಶನದಲ್ಲಿ ಬೊಮ್ಮಾಯಿ ಹೇಳಿದ್ದರು. ಹಾಗಾದರೆ ಆ ಹಣ ಎಲ್ಲಿ ಹೋಯಿತು? ಅದರಲ್ಲೂ 40% ಕಮೀಷನ್ ನುಂಗಲಾಯಿತೆ? ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
20 ಸಾವಿರ ಕೋಟಿ ಖರ್ಚು ಮಾಡಿದರೂ ರಸ್ತೆಗಳು ಅಧ್ವಾನವಾಗಿರುವ ಅರ್ಥವೇನು? ಸಾರ್ವಜನಿಕರ ಹಣಕ್ಕೆ ಬೆಲೆಯಿಲ್ಲವೇ? ಎಂದು ಕೇಳಿದ್ದಾರೆ.
ಹಾವೇರಿಯಲ್ಲಿ ಕಳೆದ 10 ತಿಂಗಳಲ್ಲಿ ಬೆಳೆಹಾನಿ ಹಾಗೂ ಸಾಲಬಾಧೆಗೆ 112 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸರ್ಕಾರದಿಂದ ರೈತರ ಉದ್ಧಾರ ಎಷ್ಟಾಗಿದೆ ಎಂಬುದಕ್ಕೆ ಈ ಆತ್ಮಹತ್ಯೆಗಳೇ ಸಾಕ್ಷಿ. ಇದು ಕೇವಲ ಒಂದು ಜಿಲ್ಲೆಯ ದುರಂತ ಕಥೆ. ಇನ್ನುಳಿದ ಜಿಲ್ಲೆಗಳ ಅಂಕಿ ಅಂಶ ತೆಗೆದರೆ ಬೊಮ್ಮಾಯಿ ಸರ್ಕಾರವೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೇವಲ 10 ತಿಂಗಳ ಅವಧಿಯಲ್ಲಿ ಹಾವೇರಿಯ 112 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಗಂಭೀರವಾದ ಸಂಗತಿ. ಹಾವೇರಿಯವರ ತವರು ಜಿಲ್ಲೆ. ಅಷ್ಟೆ ಏಕೆ, ಕೃಷಿ ಸಚಿವ ಬಿ.ಸಿ ಪಾಟೀಲ್ ಕೂಡ ಹಾವೇರಿಯವರೆ. ಸಿಎಂ ಮತ್ತು ಕೃಷಿ ಸಚಿವರು ತಾವು ಪ್ರತಿನಿಧಿಸುವ ಜಿಲ್ಲೆಯ ರೈತರನ್ನೇ ಉದ್ಧಾರ ಮಾಡದವರು, ರಾಜ್ಯದ ರೈತರ ಉದ್ಧಾರ ಮಾಡುತ್ತಾರೆಯೇ? ಎಂದು ಸರಣಿ ಟ್ವೀಟ್ ಮುಲಕ ಪ್ರಶ್ನಿಸಿದ್ದಾರೆ.