ಬೆಂಗಳೂರು: ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ ಮಠಾಧೀಶರ ನಿಯೋಗ ಬಿಜೆಪಿ ಹೈಕಮಾಂಡ್ ಗೆ ಖಡಕ್ ಎಚ್ಚರಿಕೆ ನೀಡಿದೆ.
ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿಂಗಾಲೇಶ್ವರ ಶ್ರೀ, ಸಮರ್ಥವಾಗಿ ಆಡಳಿತ ನಡೆಸುತ್ತಿರುವ ಯಡಿಯೂರಪ್ಪನರನ್ನು ಬದಲಾವಣೆ ಮಾಡಬೇಕು ಎಂಬುದು ಒಂದು ಕೆಟ್ಟ ಉದ್ದೇಶ. ಸಿಎಂ ಬಿ ಎಸ್ ವೈ ಕೇವಲ ಲಿಂಗಾಯತ ನಾಯಕ ಮಾತ್ರವಲ್ಲ, ಈ ರಾಜ್ಯದ ಎಲ್ಲಾ ವರ್ಗದ ಜನರ ಅಗ್ರಗಣ್ಯ ನಾಯಕ. ಯಡಿಯೂರಪ್ಪನವರಿಗೆ ಪೂರ್ಣಾವಧಿ ಆಡಳಿತ ನಡೆಸಲು ಅವಕಾಶ ನೀಡಬೇಕು ಎಂದರು.
ಕೊರೊನಾಕ್ಕೆ ಹೆದರಿ 15 ತಿಂಗಳಿಂದ ಕತ್ತಲ ಕೋಣೆಯಲ್ಲಿ ಬಂಧಿಯಾಗಿತ್ತು ಈ ಕುಟುಂಬ
ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರೆ ಅದಕ್ಕೆ ಯಡಿಯೂರಪ್ಪನವರೇ ಕಾರಣ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತಂದ ಯಡಿಯೂರಪ್ಪನವರಿಗೆ ಈ ಹಿಂದೆಯೂ ಸರಿಯಾಗಿ ಆಡಳಿತ ನಡೆಸಲು ಬಿಡದೇ ಅಡ್ಡಿಮಾಡಲಾಗಿದೆ. ಈಗಲೂ ಅದೇ ರೀತಿ ಮಾಡಲಾಗುತ್ತಿದೆ. ಈ ವಿಚಾರ ಸ್ವಾಮಿಜಿಗಳಿಗೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೂ ಗೊತ್ತು ಎಲ್ಲರ ಮನಸ್ಸಲ್ಲೂ ನೋವಿದೆ. ಒಂದು ವೇಳೆ ಯಡಿಯೂರಪ್ಪನವರನ್ನು ಬದಲಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಸರ್ವನಾಶವಾಗಲಿದೆ. ಇದು ನಮ್ಮ ಹೇಳಿಕೆಯಲ್ಲ ಇಡೀ ರಾಜ್ಯದ ಬಹುಸಂಖ್ಯಾತ ಜನರ ಮಾತುಗಳಾಗಿವೆ ಎಂದು ಎಚ್ಚರಿಸಿದರು.
ಎಲ್ಲಾ ಸ್ವಾಮೀಜಿಗಳು ಒಟ್ಟಾಗಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಯಡಿಯೂರಪ್ಪ ತಮ್ಮ ಅವಧಿ ಪುರ್ಣಗೊಳಿಸಲಿ. ನಾವು ಕೇವಲ ಎಚ್ಚರಿಕೆ ನೀಡಿ ಹೊರಡುತ್ತಿದ್ದೇವೆ ಹೈಕಮಾಂಡ್ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ 2-3 ದಿನಗಳಲ್ಲಿ 400-500 ಮಠಾಧೀಶರು ಬೆಂಗಳೂರಿನಲ್ಲಿ ಸಭೆ ಸೇರಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.