ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಗಳಿಂದ ಗಾಜಾ ಮಾರಾಟ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಇಬ್ಬರು ಕಾನ್ಸ್ ಟೇಬಲ್ ಗಳ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಮಾದಕವಸ್ತು ಅಪರಾಧ ಪ್ರಕರಣದಲ್ಲಿ ಇಬ್ಬರು ಕಾನ್ಸ್ ಟೇಬಲ್ ಗಳು ಈ ಹಿಂದೆಯೂ ಭಾಗಿಯಾಗಿದ್ದರು ಎಂಬುದು ಬೆಳಕಿಗೆ ಬಂದಿದೆ. ಸಿಎಂ ನಿವಾಸದ ಬಳಿ ಗಾಂಜಾ ಡೀಲ್ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಶಿವಕುಮಾರ್ ಹಾಗೂ ಸಂತೋಷ್ ಎಂಬ ಪೊಲೀಸ್ ಕಾನ್ಸ್ ಟೇಬಲ್ ಗಳು ಜಾಮೀನು ಪಡೆದಿದ್ದರು. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಬೆದರಿಕೆ ಪ್ರಕರಣ ದಾಖಲಾಗಿದ್ದು, ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಇಬ್ಬರು ಕಾನ್ಸ್ ಟೇಬಲ್ ಗಳು ಕಳೆದ ಅಕ್ಟೋಬರ್ 25ರಂದು ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್ ಬಳಿ ಆಟೋ ಚಾಲಕ ಇಲಿಯಾಸ್ ಹಾಗೂ ಆತನ ಸ್ನೇಹಿತ ಸೈಯದ್ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ವಶಕ್ಕೆ ಪಡೆದಿದ್ದರು. ಗಾಂಜಾ ತುಂಬಿದ್ದ ಮೂರು ಸಿಗರೇಟ್ ವಶಕ್ಕೆ ಪಡೆದಿದ್ದರು. ಬಳಿಕ ಬರೋಬ್ಬರಿ 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಗಾಂಜಾ ಮಾರಾಟ ಕೇಸ್ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದಾಗಿ ಇಲಿಯಾಸ್ ಕೋರಮಂಗಲ ಠಾಣೆಯಲ್ಲಿ ಇಬ್ಬರು ಕಾನ್ಸ್ ಟೇಬಲ್ ಗಳ ವಿರುದ್ಧ ದೂರು ನೀಡಿದ್ದಾನೆ.
ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ ಕ್ರಿಮಿನಲ್ ಹಿನ್ನೆಲೆಯಿದ್ದರೂ ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದಾದರೂ ಹೇಗೆ ಎಂಬುದು ಇದೀಗ ಪ್ರಶ್ನೆಯಾಗಿದೆ.