ಬೆಂಗಳೂರು: ಮೇಕೆದಾಟು ಪಾದಯಾತ್ರೆ ನಡೆಸಿದ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಿರುವುದರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ನಾಯಕರು, ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ನಡೆಸಿದ ಹಿನ್ನೆಲೆಯಲ್ಲಿ 30 ಕ್ಕು ಹೆಚ್ಚು ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಸರ್ಕಾರದ ಕ್ರಮ ಖಂಡಿಸಿ ಇದೀಗ ಕಾಂಗ್ರೆಸ್ ನಾಯಕರು ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸ, ಕಚೇರಿ ಹಾಗೂ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕರ್ಫ್ಯೂ, ಕೋವಿಡ್ ನಿಯಮ ಉಲ್ಲಂಘಿಸಿ ಬಿಜೆಪಿ ನಾಯಕರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ. ಆದರೆ ಯಾವೊಬ್ಬ ಬಿಜೆಪಿ ನಾಯಕರ ವಿರುದ್ಧವೂ ಕೇಸ್ ದಾಖಲಿಸಿಲ್ಲ. ಕಾಂಗ್ರೆಸ್ ವಿರುದ್ಧ ಮಾತ್ರ ಕೇಸ್ ದಾಖಲಿಸಿದ್ದಾರೆ. ಸರ್ಕಾರದ ತಾರತಮ್ಯ ನೀತಿ ವಿರೋಧಿಸಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಮೈಸೂರಿಗೆ ಹೋಗಿದ್ದಾರೆ. ಅವರು ಬರುವುದನ್ನೇ ಕಾಯುತ್ತಿದ್ದೇನೆ. ಬಂದ ಬಳಿಕ ಸಿಎಂ ಭೇಟಿಯಾಗುತ್ತೇವೆ. ನೆಂಟಸ್ತನ ಮಾಡುವುದಕ್ಕಾಗಿ ನಾವು ಸಿಎಂ ಭೇಟಿಯಾಗುತ್ತಿಲ್ಲ. ನಾವೇನು ಮಾಡುತ್ತೇವೆ ಎಂಬುದನ್ನು ನೋಡ್ತಾ ಇರಿ ಎಂದಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆಯಿಂದಲೇ ಮೇಕೆದಾಟು ಯೋಜನೆಗೆ ಹಿನ್ನಡೆ ಎಂದು ಆರೋಪಿಸಿದ್ದ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್, ನಾನು ಆರ್. ಅಶೋಕ್ ಅವರಷ್ಟು ಅತಿ ಬುದ್ಧಿವಂತ ಅಲ್ಲ, ಅನಗತ್ಯ ಆರೋಪ ಬೇಕಿಲ್ಲ. ನಾವು ಕುಡಿಯುವ ನೀರಿಗಾಗಿ ಹೋರಾಟ ನಡೆಸಿದ್ದೇವೆ. ಯೋಜನೆಯಿಂದ ಹಾಸನ, ಮೈಸೂರು, ತುಮಕೂರು ಜನರಿಗೂ ಅನುಕೂಲವಾಗಲಿದೆ. ಅಶೋಕ್ ಅವರಿಗೆ ಕೊರೊನಾ ಸೋಂಕು ಬಂದಿತ್ತು. ಅವರು ಇನ್ನಷ್ಟು ದಿನ ವಿಶ್ರಾಂತಿ ಪಡೆಯಲಿ ಎಂದಿದ್ದಾರೆ.