ಬೆಂಗಳೂರು: ಶಾಸಕ ಅರವಿಂದ್ ಬೆಲ್ಲದ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ, ಅರುಣ್ ಸಿಂಗ್ ರಾಜ್ಯ ಪ್ರವಾಸ ನಿಗದಿ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿದ್ದು, ಆಪ್ತ ಶಾಸಕರು ಸಿಎಂ ಭೇಟಿಯಾಗಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ಒಂದೆಡೆ ಬಿ ಎಸ್ ವೈ ವಿರೋಧಿ ಬಣಗಳು ಗೌಪ್ಯವಾಗಿ ಸಭೆ ನಡೆಸಿ ತಂತ್ರಗಾರಿಕೆ ಆರಂಭಿಸಿದ್ದರೆ ಮತ್ತೊಂದೆಡೆ ಆಪ್ತ ಬಣಗಳು ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಶಾಸಕರಾದ ಅರುಣ್ ಕುಮಾರ್ ಪೂಜಾರ್, ಪರಣ್ಣ ಮುನವಳ್ಳಿ, ಗೋಪಾಲಕೃಷ್ಣ, ದೊಡ್ಡನಗೌಡ ಪಾಟೀಲ್ ಸೇರಿದಂತೆ ಹಲವರು ಸಿಎಂ ಯಡಿಯೂರಪ್ಪ ಭೇಟಿಯಾಗಿ ಬೆಂಬಲ ಸೂಚಿಸಿದ್ದಾರೆ.
ಈ ನಡುವೆ ಅರುಣ್ ಸಿಂಗ್ ರಾಜ್ಯ ಭೇಟಿಗೂ ಮುನ್ನ ಅಸಮಾಧಾನಿತ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್ ಸೇರಿದಂತೆ ಹಲವರು ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದು, ಬಳಿಕ ಅರುಣ್ ಸಿಂಗ್ ಭೇಟಿಯಾಗಿ ತಮ್ಮ ಅಹವಾಲು ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ, ಕೋರ್ ಕಮಿಟಿ ಸಭೆ ನಿಗದಿ ಬೆನ್ನಲ್ಲೇ ಪರ-ವಿರೋಧ ಚಟುವಟಿಕೆಗಳು ಮತ್ತೆ ಗರಿಗೆದರಿವೆ.