ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಗೊಂದಲದ ನಿಲುವು ಮುಂದುವರೆಸಿದ್ದು, ಇದೀಗ ಸ್ವಪಕ್ಷದ ಶಾಸಕರೇ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಗರಂ ಆಗಿದ್ದಾರೆ.
ಪಂಚಮಸಾಲಿ ಸಮಾಜದವರು 2ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ಆರಂಭಿಸಿದ್ದರು. ಇತ್ತೀಚೆಗೆ ಸಿಎಂ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಕೊಡುವುದಾಗಿ ಹೇಳಿತ್ತು. ಆದರೆ ಎಷ್ಟು ಪ್ರಮಾಣದ ಮೀಸಲಾತಿ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸಿಎಂ ಬೊಮ್ಮಾಯಿ ಅವರ ಈ ನಡೆಗೆ ಕೆರಳಿ ಕೆಂಡವಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದು, ಸಿಎಂ ಬೊಮ್ಮಾಯಿ ಯಡಿಯೂರಪ್ಪ ಮಾತು ಕೇಳಿ ನಮಗೆ ಮೋಸ ಮಾಡಿದ್ದಾರೆ. ಮುಖ್ಯಮಂತ್ರಿಯಾದಾಗಿನಿಂದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುವುದಾಗಿ ತಾಯಿ ಮೇಲೆ ಆಣೆ ಮಾಡಿದ್ದರು. ತಾಯಿ ಮೇಲೆ ಗೌರವವಿದ್ದರೆ ಸಿಎಂ ಬೊಮ್ಮಾಯಿ 24 ಗಂಟೆಗಳಲ್ಲಿ ಮೀಸಲಾತಿ ಕಲ್ಪಿಸಲಿ. ಇಲ್ಲವಾದಲ್ಲಿ ಸಿಎಂ ಅವರ ಸ್ವಕ್ಷೇತ್ರ ಶಿಗ್ಗಾಂವಿಯಿಂದಲೇ ಪಂಚಮಸಾಲಿ ಸಮುದಾಯ ಉಗ್ರ ಹೋರಾಟ ಆರಂಭಿಸಲಿದೆ. ಸಿಎಂ ರಾಜಕೀಯ ಭವಿಷ್ಯವನ್ನೇ ನಿರ್ಧರಿಸುವ ಅಂತಿಮ ಹೋರಾಟವನ್ನು ಆರಂಭಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಪಂಚಮಸಾಲಿ ಸಮುದಾಯದವರು ಧಮ್ಕಿ ಹಾಕಿ ಮೀಸಲಾತಿ ಕೇಳುತ್ತಿದ್ದಾರೆ ಎಂದು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಾವು ಯಾವುದೇ ಧಮ್ಕಿ ಹಾಕಿಲ್ಲ. ಧಮ್ಕಿ ಹಾಕಿದ್ದರೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಿದ್ದೆವು. ನಿಮ್ಮನ್ನು ಮೂತ್ರ ವಿಸರ್ಜನೆಗೂ ಬಿಡುತ್ತಿರಲಿಲ್ಲ. ನಾವು ಏನೂ ಮಾಡದಿದ್ದರೂ ಧಮ್ಕಿ ಅಂತ ಅಪವಾದ ಮಾಡುತ್ತಿದ್ದೀರಾ ಎಂದು ಘರ್ಜಿಸಿದ್ದಾರೆ.