ಬೆಂಗಳೂರು: ನನ್ನ ಮೆಚ್ಯೂರಿಟಿ ಬಗ್ಗೆ ಮಾತನಾಡುವ ಸಿಎಂ ಬೊಮ್ಮಾಯಿ ಅಪ್ರಬುದ್ಧರು. ಅವರಿಗೆ ಮೆಚ್ಯೂರಿಟಿಯೇ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮೆಚ್ಯೂರಿಟಿ ಇಲ್ಲ. ಕಲಾವಿದರ ಕೋಟಾದಲ್ಲಿ ಆಯ್ಕೆಯಾದವರಿಗೆ 50 ಕೋಟಿ ಅನುದಾನ ಕೊಟ್ಟ ಉದಾಹರಣೆ ಎಲ್ಲಾದರೂ ಇದೆಯಾ ? ಯಾವ ಉದ್ದೇಶಕ್ಕಾಗಿ ಅನುದಾನ ಕೊಟ್ಟಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ.
ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕಾರಿನ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಪ್ರಕರಣದ ಬಗ್ಗೆ ಮಾತನಾಡಿದ್ದ ಸಿಎಂ ನಾವೆಲ್ಲರೂ ಮೆಚ್ಯೂರ್ಡ್ ಆಗಿದ್ದೇವೆ ಎಂದಿದ್ದಾರೆ. ಹೆಚ್.ಡಿ.ಕೆ. ಗೆ ಮೆಚ್ಯೂರಿಟಿ ಇಲ್ಲ ಎಂದಿದ್ದಾರೆ. ನನ್ನ ಮೆಚ್ಯೂರಿಟಿ ಬಗ್ಗೆ ಮಾತಾಡ್ತಾರಾ ? ಸಿಎಂ ಬೊಮ್ಮಾಯಿ ಅಪ್ರಬುದ್ಧರು. ನಾನು ಇದನ್ನು ಇಷ್ಟಕ್ಕೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಭಾರತ್ ರಾಷ್ಟ್ರ ಸಮಿತಿ ಎಂದು ಟಿ ಆರ್ ಎಸ್ ಪಕ್ಷದ ಹೆಸರನ್ನು ಬದಲಾವಣೆ ಮಾಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ರೈತರಲ್ಲಿ ಆರ್ಥಿಕ ಶಕ್ತಿ ತುಂಬಲು ಹಾಗೂ ರೈತ ಹೋರಾಟಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಿ ಆರ್ ಎಸ್ ನ್ನು ಬೆಂಬಲಿಸಿದ್ದೇನೆ ಎಂದರು.