ವಿಜಯನಗರ: ನಾನು ಮುಖ್ಯಮಂತ್ರಿಯಾಗಿದ್ದಾಗ ಪಕ್ಷಾತೀತವಾಗಿ ಅನುದಾನ ನೀಡಿದ್ದೆ. ಗೆದ್ದ ಮೇಲೆ ಆ ಪಕ್ಷ, ಈ ಪಕ್ಷ ಎಂದು ಹೇಳದೇ ಅಭಿವೃದ್ಧಿ ಮಾಡಬೇಕು. ಆದರೆ ಬಿಜೆಪಿಯವರು ಈವರೆಗೆ ಒಂದು ಭರವಸೆಯನ್ನಾದರೂ ಈಡೇರಿಸಿದ್ದಾರಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಜಯನಗರದ ಹಗರಿಬೊಮ್ಮನಹಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಅವರಿಗೆ ಧೈರ್ಯವಿದ್ದರೆ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲಿ. ಕಾಂಗ್ರೆಸ್ ನವರ ಧಮ್ ಬಗ್ಗೆ ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡುತ್ತಾರೆ. ಆದರೆ ಮೋದಿ ಮುಂದೆ ಸಿಎಂ ನಾಯಿಮರಿಯಂತೆ ಇರ್ತಾರೆ. ಬೊಮ್ಮಾಯಿ ಅವರೆ ಧಮ್ ತಾಕತ್ತಿದ್ದರೆ ಕೇಂದ್ರದಿಂದ ಅನುದಾನ ತನ್ನಿ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ವಿಧಾನಸೌಧದ ಗೋಡೆಗಳು ಪಿಸುಗುಡುತ್ತಿವೆ 40% ಸರ್ಕಾರ ಎಂದು. ಪ್ರದೀಪ್ ತನ್ನ ಆತ್ಮಹತ್ಯೆಗೆ ಲಿಂಬಾವಳಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಗುತ್ತಿಗೆದಾರ ಸಂತೋಷ್ ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ಬರೆದಿದ್ದರು. ಈಶ್ವರಪ್ಪಗೆ ಜೈಲು ಶಿಕ್ಷೆಯಾಗಬೇಕು. ಆದ್ರೆ ಶಿಕ್ಷೆ ಕೊಡಲಿಲ್ಲ. ಈಶ್ವರಪ್ಪಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಲಿಂಬಾವಳಿ ವಿಷಯದಲ್ಲಿ ಹೀಗಾಗಬಾರದು ಕೂಡಲೇ ಲಿಬಾವಳಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.