ಬೆಂಗಳೂರು: ಸಿಎಂ ಬದಲಾವಣೆ ವದಂತಿಗಳ ನಡುವೆ ರಾಜ್ಯ ರಾಜಕೀಯ ಚಟುವಟಿಗೆಗಳು ಗರಿ ಗೆದರಿದ ಬೆನ್ನಲ್ಲೆ ಇದೀಗ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದು, 30ಕ್ಕೂ ಹೆಚ್ಚು ಸ್ವಾಮೀಜಿಗಳು ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಬಾಲೇಹೊಸೂರಿನ ದಿಂಗಾಲೆಶ್ವರ ಶ್ರೀ ನೇತೃತ್ವದಲ್ಲಿ ಬೋವಿ ಮಠದ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ, ಮಾದಾರ ಮಠದ ಬಸವಮೂರ್ತಿ ಸ್ವಾಮೀಜಿ, ಶಿವಯೋಗಾಶ್ರಮದ ಶರಣಬಸವ ಸ್ವಾಮೀಜಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸ್ವಾಮೀಜಿಗಳು ಸೇರಿದಂತೆ ಹಲವು ಮಠಾಧೀಶರು ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ್ದು, ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರೆ.
ಸಿಂಕ್ ಹೋಲ್‌ಗೆ ಮುಗ್ಗರಿಸಿದ ಕಾರು
ಈ ವೇಳೆ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಬೇರೆಯವರು ಸಿಎಂ ಆದಾಗ ಇಲ್ಲದ ಸಮಸ್ಯೆ ಯಡಿಯೂರಪ್ಪ ಸಿಎಂ ಆದಾಗ ಸಂಭವಿಸುತ್ತಿರಲು ಕಾರಣವೇನು? ನಾಯಕತ್ವ ಬದಲಾವಣೆ ನಿರ್ಧಾರದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಒಬ್ಬರನ್ನು ನಾಯಕನೆಂದು ಆಯ್ಕೆ ಮಾಡಿದ ಮೇಲೆ ಅವರಿಗೆ ಅಧಿಕಾರ ನಡೆಸಲು ಫ್ರೀಯಾಗಿ ಬಿಡಬೇಕು. ಅದನ್ನು ಬಿಟ್ಟು ಪದೇ ಪದೇ ಅಡ್ಡಿ ಪಡಿಸುತ್ತಿರುವುದು ಯಾಕೆ? ಯಡಿಯೂರಪ್ಪ ಪಕ್ಷ ಬಿಟ್ಟಾಗ ಪಕ್ಷದ ಕಥೆ ಏನಾಗಿತ್ತು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತು.
ಈ ಬಗ್ಗೆ ನಾನು ಮಾತನಾಡಲು ಹೋಗುತ್ತಿಲ್ಲ. ಒಬ್ಬ ವ್ಯಕ್ತಿಯನ್ನು ಬೆಂಬಲಿಸಿ ಅಧಿಕಾರಕ್ಕೆ ತಂದ ಮೇಲೆ ಆ ನಾಯಕನಿಗೆ ಅಧಿಕಾರವನ್ನು ನಡೆಸಲು ಬಿಡಬೇಕು. ಅದನ್ನು ಬಿಟ್ಟು ಮತ್ತೆ ಮತ್ತೆ ಅಡ್ಡಿಯುಂಟು ಮಾಡುವ ಕೆಲಸ ನಡೆಸುವುದು ಸರಿಯಲ್ಲ. ಓಡುತ್ತಿರುವ ಗಾಡಿಗೆ ಪದೇ ಪದೇ ತಡೆಯೊಡ್ದಿ ಅಡ್ಡಿ ಪಡಿಸಿದರೆ ಹೇಗೆ? ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಯಡಿಯೂರಪ್ಪ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಾ ಆಡಳಿತ ನಡೆಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಬದಲಾವಣೆ ಮಾತುಗಳು ಚರ್ಚೆಗೆ ಬರುವುದು ಸರಿಯಲ್ಲ. ಹಾಗಾಗಿ ನಾವೆಲ್ಲರೂ ಯಡಿಯೂರಪ್ಪನವರನ್ನು ಭೇಟಿಯಾಗಿ ಅವರ ಪರ ಬೆಂಬಲ ಸೂಚಿಸುತ್ತಿದ್ದು, ಅಧಿಕಾರ ಪೂರ್ಣಗೊಳಿಸಲು ಅವಕಾಶ ನಿಡಬೇಕು ಎಂದು ಹೇಳಿದ್ದಾರೆ.
ಈ ನಡುವೆ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಹಾಗೂ ಸೊಲ್ಲಾಪುರದ ಶಿವಯೋಗಾಶ್ರಮದ ಶರಣು ಕೂಡ ಸಿಎಂ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದು, ನಾಯಕತ್ವ ಬದಲಾವಣೆ ಸರಿಯಲ್ಲ ಎಂದಿದ್ದಾರೆ.