ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಈ ನಿಟ್ಟಿನಲ್ಲಿ 65 ಶಾಸಕರ ಸಹಿ ಸಂಗ್ರಹಿಸಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಆತ್ಮಸಾಕ್ಷಿಯಾಗಿ ಹೇಳುತ್ತಿದ್ದೇನೆ. ನಾವೆಲ್ಲರೂ ಸಿಎಂ ಯಡಿಯೂರಪ್ಪನವರ ಪರ ಇದ್ದೇವೆ. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಬೇಕು ಎಂದು 65 ಶಾಸಕರಿಂದ ಸಹಿ ಸಂಗ್ರಹ ಮಾಡಿದ್ದು, ಈ ಪತ್ರ ನನ್ನ ಬಳಿ ಇದೆ. ಕೋವಿಡ್ ಮುಗಿದ ಬಳಿಕ ಹೈಕಮಾಂಡ್ ಭೇಟಿಯಾಗಿ ಪತ್ರವನ್ನು ಸಲ್ಲಿಸುತ್ತೇವೆ ಎಂದರು.
ಯಾರೋ ಕೆಲವರು ನಾಯಕತ್ವ ಬದಲಾವಣೆಗೆ ಯತ್ನಿಸುತ್ತಿರಬಹುದು ಅವರ ಷಡ್ಯಂತ್ರಕ್ಕೆ ಕಡಿವಾಣ ಹಾಕಬೇಕಿದೆ. ಕಳೆದ ಒಂದೂವರೆ ವರ್ಷದಿಂದ ಯತ್ನಾಳ್ ಸಿಎಂ ವಿರುದ್ಧ ಮಾತನಾಡುತ್ತಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಿಲ್ಲ. ಈ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಸಿ.ಪಿ. ಯೋಗೇಶ್ವರ್ ಚುನಾವಣೆಯಲ್ಲಿ ಸೋತವರು, ಸಚಿವ ಸ್ಥಾನಕ್ಕಾಗಿ ಬೆಗ್ ಮಾಡಿ ಮಂತ್ರಿಯಾದವರು ಅಷ್ಟೊಂದು ಕೇಳಿಕೊಂಡರೆಂದು ಮಂತ್ರಿ ಸ್ಥಾನ ನೀಡಿದರೆ ಈಗ ಸಿಎಂ ವಿರುದ್ಧವೇ ಮಾತನಾಡುತ್ತಿದ್ದಾರೆ. ಕೆಲವರಿಗೆ ಪಕ್ಷವನ್ನು ಅವರವರ ಕ್ಷೇತ್ರಗಳಲ್ಲಿ ಗೆಲ್ಲಿಸುವ ತಾಕತ್ತಿಲ್ಲ ಅಂತವರು ಮಂತ್ರಿಗಳಾಗಿ ಮುಖ್ಯಮಂತ್ರಿಗಳ ವಿರುದ್ಧವೇ ಪಿತೂರಿ ನಡೆಸುವುದು ಎಂದರೇನು? ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕೊರೊನಾ ಮುಗಿಯುತ್ತಿದ್ದಂತೆಯೇ ಈ ಪತ್ರವನ್ನು ವರಿಷ್ಠರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.