ಹಾವೇರಿ: ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಗಳಿಗೆ ಇನ್ನಷ್ಟು ಪುಷ್ಠಿ ನೀಡುವಂತಹ ಕೆಲ ಮಾತುಗಳು ಕೇಳಿಬಂದಿದ್ದು, ಸಿಎಂ ಬೊಮ್ಮಾಯಿ ಅವರ ವೈರಾಗ್ಯದ ಮಾತುಗಳ ಬೆನ್ನಲ್ಲೇ ಸಚಿವ ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ ಅವರು ಕೇಂದ್ರ ಸಚಿವರಾಗಲಿದ್ದಾರೆ ಎಂದು ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಮಾತನಾಡಿದ ಗಣಿ ಸಚಿವ ಮುರುಗೇಶ್ ನಿರಾಣಿ, ಸಿಎಂ ಬಸವರಾಜ್ ಬೊಮ್ಮಾಯಿ ಮುಂದೆ ಕೇಂದ್ರ ಸಚಿವರಾಗಲಿದ್ದಾರೆ ಎಂದಿದ್ದಾರೆ. ಕೆಲವರು ಏನೇನೋ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಯಾವುದೇ ಗೊಂದಲಗಳು ಬೇಡ. ಈ ಅವಧಿ ಪೂರ್ತಿ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಮುಂದೆ ಬೊಮ್ಮಾಯಿ ಅಣ್ಣ ಕೇಂದ್ರ ಮಂತ್ರಿಯಾಗುವ ವಿಶ್ವಾಸವಿದೆ ಎಂದರು.
ತಂದೆ ಎಸ್.ಆರ್. ಬೊಮ್ಮಾಯಿ ಅವರಂತೆ ಸಿಎಂ ಬೊಮ್ಮಾಯಿ ಅವರು ಕೂಡ ಕೇಂದ್ರದಲ್ಲಿಯೂ ಮಂತ್ರಿಯಾಗುತ್ತಾರೆ ಆ ವಿಶ್ವಾಸ ನಮಗಿದೆ ಎಂದು ಹೇಳಿದರು.