ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ ಬಗ್ಗೆ ತಿಳಿಯಲು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಮಹತ್ವದ ಸಭೆ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬೊಮ್ಮಾಯಿ, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಗೂ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದು, ಕಳೆದ ಒಂದು ವಾರದಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ಚರ್ಚಿಸಲಿದ್ದಾರೆ.
ಅಲ್ಲದೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಹಾಗೂ 50:50 ರೂಲ್ಸ್ ತೆರವುಗೊಳಿಸಬೇಕೇ ಅಥವಾ ಇನ್ನೂ ಕೆಲ ದಿನಗಳವರೆಗೆ ಮುಂದುವರೆಸಬೇಕೇ ಎಂಬ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಪ್ರತಿಭಟನೆ, ಮೆರವಣಿಗೆಗಳಿಗೆ ನಿರ್ಬಂಧ ಮುಂದುವರೆಸುವ ಸಾಧ್ಯತೆ ಇದ್ದು, ಸಭೆ-ಸಮಾರಂಭಗಳಿಗೂ ಜನ ಸೇರುವುದನ್ನು ನಿಯಂತ್ರಿಸುವ ಸಾಧ್ಯತೆ ಇದೆ. ವಿಶೇಷವಾಗಿ 1-9ನೇ ತರಗತಿವರೆಗೆ ಶಾಲೆ ತೆರೆಯಲು ಅನುಮತಿ ಕೊಡಬಹುದು. ಕೋವಿಡ್ ಮಾರ್ಗಸೂಚಿಗಳೊಂದಿಗೆ ನರ್ಸರಿಯಿಂದ ಹೈಸ್ಕೂಲು ವರೆಗೆ ಹಾಗೂ ಬೆಂಗಳೂರು ನಗರದಲ್ಲಿ ಶಾಲೆಗಳನ್ನು ಪುನರಾರಂಭಿಸಲು ಅನುಮತಿ ನೀಡುವ ಸಾಧ್ಯತೆ ಇದೆ.