ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದೆ. ವಿವಿಧ ಕಾರಣಗಳಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿ, ಕೆ.ಎಸ್. ಈಶ್ವರಪ್ಪ ಮೊದಲಾದವರು ಮತ್ತೆ ಸಚಿವರಾಗುವ ಇಂಗಿತ ವ್ಯಕ್ತಪಡಿಸಿದ್ದರೆ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಮಗೂ ಒಂದು ಅವಕಾಶ ಕೊಡಿ ಎಂದು ಹಿರಿಯ ಶಾಸಕರುಗಳು ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಲಾಗಿದೆ.
ಇದರ ಮಧ್ಯೆ ಅಕ್ಟೋಬರ್ 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನವದೆಹಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿಯಾಗುತ್ತಿದ್ದು, ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಕುರಿತು ಗ್ರೀನ್ ಸಿಗ್ನಲ್ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಮಾಡುವ ಸುಳಿವು ನೀಡಿದ್ದು, ಅಧಿಕೃತವಾಗಿ ಇದಕ್ಕೆ ವರಿಷ್ಠರ ಸಮ್ಮತಿ ಪಡೆಯಲಿದ್ದಾರೆ. ಹೀಗಾಗಿ ಸಚಿವಾಕಾಂಕ್ಷಿಗಳಲ್ಲಿ ಈಗ ನಿರೀಕ್ಷೆ ಗರಿಗೆದರಿದೆ.
ಅಕ್ಟೋಬರ್ 20ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಮಾರನೇ ದಿನ ಮುಖ್ಯಮಂತ್ರಿಗಳು ದೆಹಲಿಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ನವೆಂಬರ್ 10 ರಂದು ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಕುರಿತು ಆಹ್ವಾನ ನೀಡಲಿದ್ದಾರೆ. ಅಲ್ಲದೆ ಅಂದೇ ಚೆನ್ನೈ – ಬೆಂಗಳೂರು – ಮೈಸೂರು ನಡುವೆ ಸಂಚರಿಸುವ ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ.