ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ದೆಹಲಿ ಪ್ರವಾಸ ನಿಗದಿಯಾಗುತ್ತಿದ್ದಂತೆ ಸಚಿವಾಕಾಂಕ್ಷಿಗಳಲ್ಲಿ ಮಂತ್ರಿ ಸ್ಥಾನದ ಕನಸು ಮತ್ತೆ ಚಿಗುರೊಡೆದಿದ್ದು, ಸಚಿವ ಸ್ಥಾನಕ್ಕಾಗಿ ಮತ್ತೆ ಲಾಭಿ ಆರಂಭವಾಗಿದೆ.
ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ಕಸರತ್ತು ಮುಂದುವರೆಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರ ನಿವಾಸಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಿ.ಪಿ. ಯೋಗೇಶ್ವರ್ ಸಿಎಂ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಂದಲೂ ಮತ್ತೆ ಸಂಪುಟ ಸೇರಲು ಒತ್ತಡ ಹೆಚ್ಚಿದೆ.
ಮೂವರು ನಾಯಕರು ಸಚಿವ ಸ್ಥಾನಕ್ಕಾಗಿ ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ. ಪ್ರತಿ ಬಾರಿ ಭೇಟಿಯಾದಾಗಲೂ ಮೂವರು ನಾಯಕರಿಗೆ ಸಿಎಂ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ಹೇಳಿ ಭರವಸೆ ನೀಡುತ್ತಿದ್ದಾರೆ. ಆದಾಗ್ಯೂ ನಾಯಕರು ಗೊಂದಲದಲ್ಲಿದ್ದಾರೆ ಎನ್ನಲಾಗುತ್ತಿದೆ.
ನವೆಂಬರ್ 29ರಂದು ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಗೆ ತೆರಳಲಿದ್ದು, ಸಚಿವ ಸಂಪುಟ ವಿಸ್ತರಣೆ, ವಿಧಾನಸಭಾ ಚುನಾವಣೆ ತಯಾರಿ, ಪ್ರಸಕ್ತ ರಾಜ್ಯ ರಾಜಕಾರಣದಲ್ಲಿನ ವಿದ್ಯಮಾನ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ವರಿಷ್ಠರ ಜೊತೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.