ಬೆಂಗಳೂರು: 2,500 ಕೋಟಿ ರೂಪಾಯಿ ಸಿದ್ದ ಮಾಡಿಕೊಳ್ಳಿ, ಸಿಎಂ ಮಾಡುತ್ತೇವೆ ಎಂದು ನನಗೂ ಕೆಲವರು ಹೇಳಿದ್ದರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದ ಹುಟ್ಟುಹಾಕಿದ್ದು, ಯತ್ನಾಳ್ ಹೇಳಿಕೆ ಬಗ್ಗೆ ಪ್ರಕರಣ ದಾಖಲಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಶಾಸಕ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಿಎಂ ಆಗಲು 2,500 ಕೋಟಿ ರೂಪಾಯಿ ಕೊಡಬೇಕು ಎಂದು ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಲಿ. ಯತ್ನಾಳ್ ಹೇಳಿಕೆ ಬಗ್ಗೆ ಕೇಸ್ ರಿಜಿಸ್ಟರ್ ಆಗಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ಕಿಡಿಕಾರಿದ ಡಿ.ಕೆ. ಶಿವಕುಮಾರ್, ಕೊರೊನಾ ಸೋಂಕು ಬಿಜೆಪಿ ಸರ್ಕಾರ ಜನರಿಗೆ ನೀಡಿದ ಗಿಫ್ಟ್. ಸಾವಿನ ಸಂಖ್ಯೆಯಲ್ಲಿಯೂ ಸುಳ್ಳು ಲೆಕ್ಕ ತೋರಿಸಿದ್ದಾರೆ. ಕೋವಿಡ್ ಗೆ 4.8 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದರು. ಆದರೆ ಭಾರತದಲ್ಲಿಯೇ 47 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು WHO ವರದಿಯೇ ತಿಳಿಸಿದೆ. ಈಗಲಾದರೂ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದರು.
ಕೋವಿಡ್ ಸಾವಿನ ಸಂಖ್ಯೆ ಅಂಕಿ-ಅಂಶ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೂ ಒತ್ತಾಯಿಸಿದ್ದೆವು. ಬಿ ಎಸ್ ವೈ ಸಿಎಂ ಆಗಿದ್ದಾಗ ಅಂಕಿ-ಅಂಶ ಬಿಡುಗಡೆ ಮಾಡ್ತೀವಿ ಎಂದವರು ಮಾಡಿಲ್ಲ. ಆರೋಗ್ಯ ಸಚಿವರು ಅಂಕಿ-ಅಂಶವನ್ನೇ ಮುಚ್ಚಿ ಹಾಕಿದ್ದಾರೆ. ಕೋವಿಡ್ ನಿಂದ ಮೃತರಾದವರ ಕುಟುಂಬಕ್ಕೆ ಇನ್ನೂ ಪರಿಹಾರ ನೀಡಿಲ್ಲ. ತಕ್ಷಣ 5 ಲಕ್ಷ ಪರಿಹಾರ ನೀಡಿ ಎಂದು ಒತ್ತಾಯಿಸಿದರು.