ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಇದೊಂದು ದೊಡ್ಡ ಷಡ್ಯಂತ್ರವಾಗಿದ್ದು, ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ಹನಿಟ್ರ್ಯಾಪ್ ಮಾಡುವ ಪ್ಲಾನ್ ಮಾಡಿ, ನಕಲಿ ವಿಡಿಯೋ ಮಾಡಿದ್ದಾರೆ. ಈ ಸಿಡಿಗಾಗಿ ಬರೋಬ್ಬರಿ 15 ಕೋಟಿ ಖರ್ಚು ಮಾಡಿ, 4 ಟೀಮ್ ಗಳು ಕೆಲಸ ಮಾಡಿವೆ. ಈ ಸಿಡಿ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಮಹಿಳೆ ಹಾಗೂ ಮಹಿಳೆಯ ಹಿಂದೆ ಮೂರು ಜನರು ಹಾಗೂ ಆ ಮೂರು ಜನರ ಹಿಂದೆ ಇನ್ನೂ ನಾಲ್ಕು ಜನರು ಒಟ್ಟು 4 ಗುಂಪುಗಳು ಇದರ ಹಿಂದಿದೆ ಎಂದು ತಿಳಿದುಬಂದಿದೆ ಎಂದರು.
BIG NEWS: ರಮೇಶ್ ಜಾರಕಿಹೊಳಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಮಹತ್ವದ ಸಲಹೆ
ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ. ಆ ಮಹಿಳೆಯನ್ನು ಸಂತ್ರಸ್ತ ಮಹಿಳೆ ಎಂದು ದಯವಿಟ್ಟು ಮಾಧ್ಯಮಗಳು ಪ್ರಸಾರಮಾಡಬಾರದು. ವಿಡಿಯೋ ಕಟ್ ಪೇಸ್ಟ್ ಮಾಡಲಾಗಿದೆ. ರಮೇಶ್ ಜಾರಕಿಹೊಳಿ ಮನೆಯಿಂದ ಹೊರಬಂದು ಈ ಬಗ್ಗೆ ದೂರು ನೀಡಲಿ. ಇಲ್ಲವಾದಲ್ಲಿ ನಮಗೆ ದೂರು ನೀಡುವಂತೆ ಸೂಚಿಸಲಿ. ಜಾರಕಿಹೊಳಿ ಕುಟುಂಬದ ತೇಜೋವಧೆ ಮಾಡುವ ಉದ್ದೇಶದಿಂದಲೇ ಚುನಾವಣೆ ಸಂದರ್ಭದಲ್ಲಿ ಇಂತಹ ತಂತ್ರ ಹೆಣೆಯಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಸಿಡಿ ಬಿಡುಗಡೆ ಮಾಡಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ ಕೆಸ್ ವಾಪಸ್ ಪಡೆಯುತ್ತಿದ್ದಾರೆ. ದಿನೇಶ್ ಕಲ್ಲಹಳ್ಳಿ ಕೂಡ ಯಾವುದೋ ಒತ್ತಡಕ್ಕೆ ಮಣಿದು ಹೀಗೆ ಮಾಡಿರಬಹುದು. ಅವರನ್ನು ಯಾರೋ ಮಿಸ್ ಗೈಡ್ ಮಾಡಿದ್ದಾರೆ. ಅವರು ದೂರು ನೀಡುವ ಮೊದಲೇ ರಷ್ಯಾದಲ್ಲಿ ಕುಳಿತು ವಿಡಿಯೋ ಯೂಟೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿತ್ತು. ಹೀಗಾಗಿ ಇಡೀ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಹೇಳಿದರು.