ಬೆಂಗಳೂರು: ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ಕಿತ್ತಾಟದ ಬಗ್ಗೆ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಾವರ್ಕರ್ ರಥಯಾತ್ರೆ, ಮಾಂಸಾಹಾರ ಸೇವನೆ ಇಂತಹ ವಿಚಾರಗಳಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ಜನರು ಶಾಂತಿ-ಸೌಹಾರ್ದಯುತವಾಗಿ ಬದುಕಲು ಬಿಡದೇ ಹೊಸ ಹೊಸ ವಿವಾದಗಳನ್ನು ಸೃಷ್ಟಿಸುತ್ತಾ ಅನಗತ್ಯವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಕೆಲಸಕ್ಕೆ ಬಿಜೆಪಿ, ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಸಾವರ್ಕರ್ ವಿಚಾರ, ಮಾಂಸಾಹಾರ ಸೇವನೆ ಇಂತದ್ದರಿಂದ ಯಾರಿಗಾದರೂ ಪ್ರಯೋಜನವಿದೆಯೇ? ಜನರ ಸಂಕಷ್ಟ ಪರಿಹರಿಸುವುದನ್ನು ಬಿಟ್ಟು ಜನನಾಯಕರು ಕೊಡಗು, ಮಡಿಕೇರಿಯಲ್ಲಿ ಶಾಂತಿ ಕದಡಲು ಹೋಗಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಶಾಂತಿ ಸಂದೇಶ ಸಾರಲು ಬರುತ್ತಾರೋ ಅಥವಾ ಶಾಂತಿ ಕದಡಲು ಬರುತ್ತಾರಾ? ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಲು ಯಾವ ನೈತಿಕತೆ ಬಿಜೆಪಿಯಲ್ಲಿದೆ? 40% ಸರ್ಕಾರ ಇಟ್ಟುಕೊಂಡು ಯಾವ ಸಂದೇಶ ರವಾನಿಸಲು ಹೊರಟಿದ್ದೀರಾ? ಎಂದು ವಾಗ್ದಾಳಿ ನಡೆಸಿದರು.