ಮಡಿಕೇರಿ: ಒಂದು ದೇಶ ಒಂದು ಭಾಷೆ ಹಿಂದಿ ಆಗಿರಬೇಕು. ಹಿಂದೂ ರಾಷ್ಟ್ರವಾಗಬೇಕು ಎಂಬ ಸಾತ್ಯಕಿ ಸಾವರ್ಕರ್ ಹೇಳಿಕೆಗೆ ಕಿಡಿ ಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಾವರ್ಕರ್ ಮೊಮ್ಮಗನನ್ನು ಕಟ್ಟಿಕೊಂಡು ನನಗೇನಾಗಬೇಕು? ನನ್ನ ಜನ ಹೊಟ್ಟೆಗೆ ಹಿಟ್ಟಿಲ್ಲದೇ ಸಾಯುತ್ತಿದ್ದಾರೆ. ಮೊದಲು ಅವರ ಬದುಕು ಕಟ್ಟಿಕೊಡುವ ಕೆಲಸ ಮಾಡಲಿ ಎಂದು ಗುಡುಗಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಹಿಂದಿ ಭಾಷೆ ಹೇರಿಕೆ ಕೆಲಸ ಮಾಡಲಾಗುತ್ತಿದೆ. ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡದೇ ಒಂದು ಭಾಷೆ ಒಂದು ದೇಶ ಎಂದು ಹೇಳುವ ಮೂಲಕ ಬಲವಂತದ ಹಿಂದಿ ಹೇರಿಕೆ ನಡೆಯುತ್ತಿದೆ. ಸಾತ್ಯಕಿ ಯಾರು? ಸಾವರ್ಕರ್ ಮೊಮ್ಮಗ ಯಾರು ಆ ಮನುಷ್ಯ? ಅವನಿಂದ ನಮಗೇನಾಗಬೇಕಿದೆ? ಮೊದಲು ಜನರ ಬದುಕು ಕಟ್ಟಿಕೊಡಲು ನೋಡಲಿ ಎಂದರು.
ಮೂರು ವರ್ಷದಿಂದ ಭೂಕುಸಿತ, ಮನೆ ಹಾನಿ, ಬೆಳೆ ನಾಶದಿಂದ ಕೊಡಗಿನಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಅವರಿಗೆ ಯಾವ ಬದುಕು ಕಟ್ಟಿ ಕೊಟ್ಟಿದ್ದೀರಿ? ಮೊದಲು ಈ ಬಗ್ಗೆ ಹೇಳಿ. ಆಮೇಲೆ ನಿಮ್ಮ ಹಿಂದಿ ಭಾಷೆ ಬಗ್ಗೆ ಚರ್ಚೆ ಮಾಡಲಿ. ಸಾವರ್ಕರ್ ಮಗನೋ, ಮೊಮ್ಮಗನೋ ಇಲ್ಲಿಗೆ ಬಂದು ನಮಗೆ ಉಪದೇಶ, ಬೋದನೆ ಮಾಡುವ ಅಗತ್ಯವೇನಿದೆ ? ಮೊದಲು ಜನರ ಬದುಕನ್ನು ಕಟ್ಟಿಕೊಡುವ ಬಗ್ಗೆ ಸರ್ಕಾರ ಕಿಂಚಿತ್ತಾದರೂ ಯೋಚಿಸಲಿ ಎಂದು ಹೇಳಿದರು.