ಬೆಂಗಳೂರು: ನಾನು ಸಾವರ್ಕರ್ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೋಸ್ಟರ್ ರಾರಾಜಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಾವರ್ಕರ್ ಪಾದದ ಧೂಳಿಗೂ ರಾಹುಲ್ ಗಾಂಧಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಅಂಡಮಾನ್ ಜೈಲು ನೋಡಿದ್ರೆ ರಾಹುಲ್ ಗಾಂಧಿ ಚಡ್ಡಿ, ಪ್ಯಾಂಟ್ ಒದ್ದೆಯಾಗುತ್ತೆ. ಈ ಜನ್ಮ ಅಲ್ಲ, ಮುಂದಿನ ಜನ್ಮದಲ್ಲೂ ಅವರು ಸಾವರ್ಕರ್ ಆಗಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಮೊದಲು ಸಾರ್ವಜನಿಕವಾಗಿ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.
ಇದೇ ವೇಳೆ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಿ.ಟಿ. ರವಿ, ಭ್ರಷ್ಟಾಚಾರ ಮುಚ್ಚಿ ಹಾಕಲು ಬೀದಿಗಿಳಿದು ನಾಟಕವಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದರು.
ಹಗರಣಗಳ ಸರ್ದಾರ ಎಂದರೆ ಕಾಂಗ್ರೆಸ್ ಪಾರ್ಟಿ, ಅಡಿಯಿಂದ ಮುಡಿಯವರೆಗೂ ಬರಿ ಹಗರಣಗಳನ್ನೇ ಹೊದ್ದು ಮಲಗಿದೆ. ಭ್ರಷ್ಟಾಚಾರ ನಡೆಸಿದವರಿಗೆ ಭ್ರಷ್ಟರೇ ಬೆಂಬಲವನ್ನು ನೀಡುತ್ತಿದ್ದಾರೆ. ಗಾಂಧಿ ಕುಟುಂಬ ಕಾಪಾಡಿಕೊಳ್ಳಲು ಕಾರ್ಯಕರ್ತರ ಬಳಕೆ ನಡೆದಿದೆ. ಮೇವು ತಿಂದವರ ಜತೆ ಪೇಪರ್ ತಿಂದವರೂ ಜೈಲಿಗೆ ಹೋಗ್ತಾರೆ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.