ಶಿವಮೊಗ್ಗ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನವರು ಸುಳ್ಳು ಗ್ಯಾರಂಟಿಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದೆ ಎಂದು ಟೀಕಿಸಿದರು.
ಶಿವಮೊಗ್ಗದ ಆಯನೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರೂ ಕರ್ನಾಟಕದ ಸಿಎಂ ಆಗಿದ್ದರು. ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕಾಗಿ ಯಡಿಯೂರಪ್ಪನವರು ನಿಯೋಗ ತೆಗೆದುಕೊಂಡು ದೆಹಲಿಗೆ ಆಗಮಿಸಿದ್ದರು. ಶಿವಮೊಗ್ಗ ಜಿಲ್ಲೆಯ ರೈತರ ಕಲ್ಯಾಣಕ್ಕಾಗಿ ಯಡಿಯೂರಪ್ಪ ಶ್ರಮಿಸಿದ್ದಾರೆ. ಅಡಿಕೆ ಬೆಳೆಗಾರರು ಯಾವುದೇ ಆತಂಕಕ್ಕೀಡಾಗುವ ಅಗತ್ಯವಿಲ್ಲ. ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕಾಗಿ ಹಲವಾರು ಯೋಜನೆಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಪ್ರತಿ ವರ್ಷ 30ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿದೆ. 9 ವರ್ಷಗಳಲ್ಲಿ 2000ಕ್ಕೂ ಹೆಚ್ಚು ವಿವಿಧ ಬಿತ್ತನೆ ಬೀಜ ಉತ್ಪಾದನೆ ಮಾಡಲಾಗಿದೆ. 3000ಕ್ಕೂ ಹೆಚ್ಚು ಮೆಡಿಕಲ್ ಕಾಲೇಜು ಸ್ಥಾಪಿಸಿದ್ದೇವೆ. ಪಿ ಎಂ ಫಸಲ್ ಭೀಮಾ ಯೋಜನೆಯಡಿ ರೈತರಿಗೆ 1 ಲಕ್ಷ 30 ಕೋಟಿ ಹಣ ನೀಡಿದ್ದೇವೆ ಎಂದರು.
ಈ ಹಿಂದೆ ಕಾಂಗ್ರೆಸ್ ಸಾಲ ಮನ್ನಾ ಮಾಡುವುದಾಗಿ ಹೇಳಿ ಲೂಟಿ ಮಾಡಿತ್ತು. ಈಗ ಕಾಂಗ್ರೆಸ್ ನವರು ಸುಳ್ಳು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಎಂದೂ ಕರ್ನಾಟಕದ ಅಭಿವೃದ್ಧಿ ಬಯಸುವುದಿಲ್ಲ, ಕಾಂಗ್ರೆಸ್ ಭರವಸೆಗಳಿಗೆ ಮರುಳಾಗಬೇಡಿ ಎಂದರು. ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ನಂಬರ್ 1 ಮಾಡುವುದೇ ನನ್ನ ಗುರಿ ಎಂದ ಪ್ರಧಾನಿ ಮೋದಿ, ಜೀವನಪೂರ್ತಿ ಕರ್ನಾಟಕದ ಋಣಿಯಾಗಿರುತ್ತೇನೆ. ಇಲ್ಲಿನ ಜನರ ಪ್ರೀತಿ ವಿಶ್ವಾಸವನ್ನು ಎಂಡೂ ಮರೆಯುವುದಿಲ್ಲ ಎಂದು ಹೇಳಿದರು.