ಎರಡು ವರ್ಷಗಳ ಹಿಂದೆ ದೇಶಕ್ಕೆ ಮಹಾಮಾರಿಯಾಗಿ ಕೊರೊನಾ ವಕ್ಕರಿಸಿದ ಪರಿಣಾಮ ಸಾರ್ವಜನಿಕರು ಹೈರಾಣಾಗಿ ಹೋಗಿದ್ದರು. ಕೊರೊನಾ ತಡೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ನಿರ್ಬಂಧನೆಗಳನ್ನು ಹೇರಿದ್ದು, ಇದು ಸಾರ್ವಜನಿಕ ಗಣೇಶೋತ್ಸವದ ಮೇಲೂ ಪರಿಣಾಮ ಬೀರಿತ್ತು.
ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧಗಳನ್ನು ಹೇರಿದ್ದ ಪರಿಣಾಮ, ಈ ಉತ್ಸವ ಕಳೆಗುಂದಿತ್ತು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ಬಾರಿಯೂ ಬೀದಿ ಬೀದಿಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದ ಗಣೇಶ ಮೂರ್ತಿಗಳು ವಿರಳವಾಗಿದ್ದವು.
ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗಿರುವ ಕಾರಣ ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ ಎಂದು ತಿಳಿದುಬಂದಿದೆ. ಕೊರೊನಾ ಪೂರ್ವದಲ್ಲಿ ಯಾವ ರೀತಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿತ್ತೋ ಅದೇ ರೀತಿಯಲ್ಲಿ ಈ ಬಾರಿಯೂ ಗಣೇಶೋತ್ಸವ ತನ್ನ ಎಂದಿನ ವೈಭವ ಮರಳಿ ಪಡೆಯಲಿದೆ.