ಬೆಂಗಳೂರು: ಕೆಲಸದಿಂದ ವಜಾಗೊಂಡಿದ್ದ ಸಾರಿಗೆ ನೌಕರರನ್ನು ಮರುನೇಮಕ ಮಾಡಿಕೊಳ್ಳುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಈ ಹಿಂದೆ ಲಕ್ಷ್ಮಣ ಸವದಿ ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರ ವಿರುದ್ಧ ಕ್ರಮ ಕೈಗೊಂಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹಲವು ಸಾರಿಗೆ ನೌಕರರನ್ನು ವಜಾಗೊಳಿಸಿ ಆದೇಶ ಹೊರಡಿಸಿತ್ತು. ಇದೀಗ ಬೊಮ್ಮಾಯಿ ನೇತೃತ್ವದ ಸರ್ಕಾರ ಸಾರಿಗೆ ನೌಕರರ ವಜಾ ಆದೇಶವನ್ನು ಹಿಂಪಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಸಾರಿಗೆ ಸಚಿವ ಶ್ರೀರಾಮುಲು, ಪ್ರತಿಭಟನೆ ವೇಳೆ ವಜಾಗೊಂಡಿದ್ದ ನಾಲ್ಕು ನಿಗಮಗಳ ಸಾರಿಗೆ ನೌಕರರು, ವರ್ಗಾವಣೆ, ಸಸ್ಪೆಂಡ್ ಆಗಿದ್ದಂತಹ ನೌಕರರನ್ನು ರಿವೋಕ್ ಮಾಡಲಾಗುವುದು. ಈ ಕುರಿತು ಸಾರಿಗೆ ನಿಗಮಗಳ ಎಂಡಿ ಜೊತೆ ಚರ್ಚೆ ನಡೆಸಿದ್ದೇನೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಲಕ್ಷ್ಮಣ ಸವದಿ ಎಲ್ಲರೊಂದಿಗೂ ಮಾತನಾಡಿದ್ದು, ಇನ್ಮುಂದೆ ಅಂತಹ ಯಾವುದೇ ಘಟನೆ ನಡೆಯಬಾರದು ಆ ನಿಟ್ಟಿನಲ್ಲಿ ವಜಾ ಆದೇಶ ಹಿಂಪಡೆಯುವ ಬಗ್ಗೆ ತೀರ್ಮಾನಿಸಲಾಗಿದೆ. ನಾಳೆಯೇ ಸಾರಿಗೆ ಇಲಾಖೆ ನೌಕರರನ್ನು ಕರೆದು ಮಾತನಾಡುವುದಾಗಿ ತಿಳಿಸಿದರು.