ಸೇವೆಯ ಹೆಸರಿನಲ್ಲಿ ಪ್ರಯಾಣಿಕರಿಂದ ಹಣ ಸುಲಿಗೆ ಮಾಡುತ್ತಿರುವ ಆರೋಪಕ್ಕೊಳಗಾಗಿದ್ದ ಓಲಾ ಹಾಗೂ ಉಬರ್ ಆಟೋ ಸೇವೆ ಸಾರಿಗೆ ಇಲಾಖೆ ಆಯುಕ್ತರ ಎಚ್ಚರಿಕೆ ನಡುವೆಯೂ ಇಂದು ಸಂಚಾರ ನಡೆಸುತ್ತಿವೆ. ಓಲಾ ಹಾಗೂ ಉಬರ್ ಆಟೋ ಸೇವೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದರೂ ಈ ಸಂಸ್ಥೆಗಳು ಕ್ಯಾರೆ ಎಂದಿಲ್ಲ.
ಅಗ್ರಿಗೇಟೆಡ್ ಲೈಸೆನ್ಸ್ ಪ್ರಕಾರ ಓಲಾ ಹಾಗೂ ಉಬರ್ ಕಂಪನಿಗಳಿಗೆ ತ್ರಿಚಕ್ರ ವಾಹನ ಸೇವೆ ನೀಡುವ ಅವಕಾಶವೇ ಇರಲಿಲ್ಲವೆಂದು ಹೇಳಲಾಗಿದ್ದು, ಆದರೂ ಕೂಡ ಇವುಗಳು ಆಟೋ ಸೇವೆ ಆರಂಭಿಸಿದ್ದವು. ಹೆಚ್ಚಿನ ಹಣ ಸುಲಿಗೆ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಂಗಳವಾರದಂದು ಸಭೆ ನಡೆಸಲಾಗಿತ್ತು.
ಈ ವೇಳೆ ಅಗ್ರಿಗೇಟರ್ ಲೈಸೆನ್ಸ್ ಪ್ರಕಾರ ತ್ರಿಚಕ್ರ ವಾಹನ ಸೇವೆ ನೀಡುವ ಅವಕಾಶವಿಲ್ಲದ ಕಾರಣ ಲೈಸೆನ್ಸ್ ಸಿಗುವವರೆಗೂ ಆಟೋ ಸೇವೆ ಸ್ಥಗಿತಗೊಳಿಸುವಂತೆ ತಿಳಿಸಲಾಗಿತ್ತು. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಪ್ರತಿ ಆಟೋಗೆ ರೂ.5,000ದಂತೆ ಕಂಪನಿಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಇದಕ್ಕೆ ಯಾವುದೇ ಮನ್ನಣೆ ನೀಡದ ಉಭಯ ಕಂಪನಿಗಳು ಇಂದೂ ಕೂಡ ಹೆಚ್ಚಿನ ದರಕ್ಕೆ ಆಟೋ ಸೇವೆ ನೀಡುತ್ತಿವೆ.