
ಹೈದರಾಬಾದ್: ಬಹುಭಾಷಾ ನಟಿ ಜಮುನಾ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಮುನಾ ಇಂದು ಹೈದರಾಬಾದ್ ನಲ್ಲಿ ಕೊನೆಯುಸಿರೆಳೆದಿdದ್ದಾರೆ.
ಹೈದರಾಬಾದ್ ನ ಸ್ವಗೃಹದಲ್ಲಿ ಜಮುನಾ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ. 1953ರಲಿ ತೆಲುಗಿನ ಪುಟ್ಟಿಲ್ಲು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಟಿ ಜಮುನಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಸೇರಿದಂತೆ ಹಲವು ಭಾಷೆಗಳಲ್ಲಿ ಜನಪ್ರಿಯತೆ ಪಡೆದಿದ್ದರು. ರಾಜಕೀಯ ರಂಗದಲ್ಲಿಯೂ ಗುರುತಿಸಿಕೊಂಡಿದ್ದರು.
ಕನ್ನಡದಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಸಾಕ್ಷಾತ್ಕಾರ, ಭೂ ಕೈಲಾಸ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ತೆಲುಗಿನ ಬಂಗಾರು ಪಾಪ, ದೊಂಗ ರಾಮುಡು, ಗುಂಡಮ್ಮ ಕಥ, ಶ್ರೀಕೃಷ್ಣ ತುಲಾಭಾರಂ, ತೆನಾಲಿ ರಾಮಕೃಷ್ಣ, ಮಾ ಇಮ್ಟಿ ಮಹಾಲಕ್ಷ್ಮಿ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದರು. 1936ರಲ್ಲಿ ಹಂಪಿಯಲ್ಲಿ ಜನನಿಸಿದ್ದ ಜಮುನಾ ಗುಂಟೂರಿನ ದಿಗ್ಗಿರಾಲದಲ್ಲಿ ಬಾಲ್ಯದ ದಿನಗಳನ್ನು ಕಳೆದಿದ್ದರು. ಚಿಕ್ಕಂದಿನಲ್ಲಿಯೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಜಮುನಾ, ಬಳಿಕ ಎನ್ ಟಿ ಆರ್, ನಾಗೇಶ್ವರ್ ರಾವ್, ಜಗ್ಗಯ್ಯ ಸೇರಿದಂತೆ ತೆಲುಗಿನ ಅಂದಿನ ಸೂಪರ್ ಸ್ಟಾರ್ ಗಳ ಜತೆ ಅಭಿನಯಿಸಿ ಜನಪ್ರಿಯತೆ ಪಡೆದಿದ್ದರು.