ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಪರಿಚಿತನಾಗಿದ್ದ ಯುವಕನಿಗೆ ಸಹಾಯ ಮಾಡಲು ಹೋದ ಯುವತಿಯೊಬ್ಬಳು ಬರೋಬ್ಬರಿ 13 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ಆತ ವಂಚಿಸಿದ್ದು, ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪ್ರಕರಣದ ವಿವರ: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಯುವತಿ ಶಿವಮೊಗ್ಗದ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು, ವಿವಾಹವಾಗುವ ಉದ್ದೇಶದಿಂದ ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಹುಡುಕಾಟ ನಡೆಸಿದ್ದರು.
ಈ ವೇಳೆ ಅವರಿಗೆ ವಿಜಯ್ ರಾಜ್ ಗೌಡ ಎಂಬಾತನ ಪ್ರೊಫೈಲ್ ಸಿಕ್ಕಿದ್ದು, ರಿಕ್ವೆಸ್ಟ್ ಕಳುಹಿಸಿದ್ದಾರೆ. ಇದಾದ ಒಂದು ಗಂಟೆಯಲ್ಲೇ ಇದಕ್ಕೆ ಉತ್ತರಿಸಿದ ಆತ, ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ.
ಆನಂತರ ಇಬ್ಬರು ಪರಸ್ಪರ ಮಾತುಕತೆ ನಡೆಸಿಕೊಂಡು ಬಂದಿದ್ದು, ಆಗಸ್ಟ್ 5ರಂದು ಯುವತಿಗೆ ಕರೆ ಮಾಡಿದ ಆತ ನನ್ನ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದಾರೆ. ಹೀಗಾಗಿ ಒಂದಷ್ಟು ಹಣ ಬೇಕಾಗಿದ್ದು, ಬಳಿಕ ವಾಪಸ್ ಕೊಡುವುದಾಗಿ ಹೇಳಿದ್ದಾನೆ.
ಇದನ್ನು ನಂಬಿ ಯುವತಿ ಆಗಸ್ಟ್ 5 ರಿಂದ ಆಗಸ್ಟ್ 22ರವರೆಗೆ ಹಂತ ಹಂತವಾಗಿ 13.55 ಲಕ್ಷ ರೂಪಾಯಿಗಳನ್ನು ಆತ ಹೇಳಿದ ಖಾತೆಗೆ ಜಮಾ ಮಾಡಿದ್ದು, ಯಾವಾಗ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟನೋ ಆಗ ಅನುಮಾನ ಬಂದಿದೆ. ಆ ನಂತರ ಆತ ಯುವತಿಯ ಮೊಬೈಲ್ ಕರೆಯನ್ನೇ ಸ್ವೀಕರಿಸಿಲ್ಲ. ಇದೀಗ ಆರೋಪಿ ವಿರುದ್ಧ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.